Bengaluru Rains: ನಗರಾದ್ಯಂತ ಇಂದು ಜೋರು ಮಳೆ ಅಬ್ಬರ, ಹವಾಮಾನ ಮುನ್ಸೂಚನೆ
ಬೆಂಗಳೂರು, ಮೇ 02: ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಗೆ ಆಟೋ ಚಾಲಕ ಮೃತಪಟ್ಟ ಮಾರನೇ ಅಂದರೆ ಇಂದು ಶುಕ್ರವಾರ ನಗರದಲ್ಲಿ ವರ್ಷಧಾರೆ ಮತ್ತೆ ಮುಂದುವರಿದಿದೆ. ನೆನ್ನೆ ಹಂಪಿನಗರ, ವಿಜಯನಗರದಲ್ಲಿ ಭಾರೀ ಮಳೆ ದಾಖಲಾಗಿತ್ತು. ಇಂದು ನಗರಾದ್ಯಂತ ಸುರಿಯುತ್ತಿರುವ ಗುಡುಗು ಸಹಿತ ಮಳೆ, (Bengaluru Rains update) ಮುಂದಿನ 03 ದಿನ ಹೀಗೆ ಸುರಿಯಲಿದೆ. ತಂಪು ವಾತಾವರಣ ಕಂಡು ಬರಲಿದ್ದು, ತಾಪಮಾನದಲ್ಲಿ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರ ಸಂಜೆ ಆಗುತ್ತಿದ್ದಂತೆ ಕೋರಮಂಗಲ, ಡೈರಿ ವೃತ್ತ, ಲಾಲ್ ಬಾಗ್, ಯಲಹಂಕ, ಬೆಳ್ಳಂದೂರು, ಮೆಜೆಸ್ಟಿಕ್, ವಿದ್ಯಾರಣ್ಯಪುರ, ರಾಜಾಜಿನಗರ, ಜಯನಗರ, ಚಾಮರಾಪೇಟೆ, ಯಶವಂತಪುರ, ಎಲೆಕ್ಟ್ರಾನಿಕ್ ಸಿಟಿ, ಬೆಳ್ಳಂದೂರು ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆ ದಾಖಲಾಗಿದೆ.

ಮೇ 6ರ ವರೆಗೆ ನಗರಾದ್ಯಂತ ಭಾರೀ ಮಳೆ
ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ಮಳೆ ಮುಂದುವರಿಯಲಿದೆ. ಸಂಜೆ ಆಗುತ್ತಿದ್ದಂತೆ ಗುಡುಗು ಸಹಿತ ಭಾರೀ ಮಳೆ ಆಗಲಿದೆ. ಕಚೇರಿಯಿಂದ ಹೋಗುವವರು, ಬೀದಿ ಬದಿ ವ್ಯಾಪಾರಿಗಳು ಎಚ್ಚರ ವಹಿಸಬೇಕಿದೆ. ಪೂರ್ವ ಮುಂಗಾರು ಹೆಚ್ಚು ಚುರುಕಾಗಿದ್ದು, ಮೇ 6ರ ವರೆಗೆ ನಗರಾದ್ಯಂತ ಅಬ್ಬರಿಸುವ ಮುನ್ಸೂಚನೆ ಇದೆ.
ಆರ್‌ಆರ್ ನಗರ, ಕುಮಾರಸ್ವಾಮಿ ಬಡಾವಣೆ, ಶಂಕರಮಠ, ಬನಶಂಕರಿ, ಸಿಲ್ಕಬೋರ್ಡ್, ಬಸನಗುಡಿ, ಹೊರಮಾವು, ನಾಗರಭಾವಿ, ಬೆಳ್ಳಂದೂರು, ದೊಮ್ಮಲೂರು, ಬೇಗೂರು, ಬೆಂಗಳೂರು ಎಚ್‌ಎಎಲ್ ಏರ್‌ಪೋರ್ಟ್ ಸೇರಿದಂತೆ ಅನೇಕ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ.

ಜೋರು ಗಾಳಿ ಮಳೆಗೆ ಮರದ ಕೊಂಬೆಗಳು ಅಲ್ಲಲ್ಲಿ ಮುರಿದು ಬಿದ್ದಿವೆ. ನಗರದ ತಾಪಮಾನ ಮುಂದಿನ ಒಂದು ವಾರ ಗರಿಷ್ಠ 32-33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ಭಾರೀ ಮಳೆ ದಾಖಲು
ಹಾಸನ, ಮಂಡ್ಯ, ಚಿಕ್ಕಮಗಳೂರು, ತುಮಕೂರು ಮತ್ತು ಮೈಸೂರು ಜಿಲ್ಲೆಗಳಿಗೆ ಭಾರಿ ಮಳೆ ಪ್ರಯುಕ್ತ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇದರ ಬೆನ್ನಲ್ಲೆ ಬೆಂಗಳೂರು ನಗರದಲ್ಲಿ ಮಳೆ ಅಬ್ಬರ ಜೋರಾಗಿದೆ. ಗುರುವಾರ ಮಾರುತಿ ಮಂದಿರದಲ್ಲಿ 59 ಮಿಲಿ ಮೀಟರ್, ಗಾಳಿ ಆಂಜನೇಯ ದೇವಸ್ಥಾನ 59 ಮಿ.ಮೀ, ಹಂಪಿನಗರ 59 ಮಿ.ಮೀ. ಜ್ಞಾನಭಾರತಿ ಕ್ಯಾಂಪಸ್ 46, ವಿದ್ಯಾಪೀಠ 46 ಮಿಲಿ ಮೀಟರ್ ಮಳೆ ಆಗಿದೆ. ನೆನ್ನೆ ನಗರದ ಬಹುತೇಕ ಎಲ್ಲ ಭಾಗಗಳಲ್ಲಿ ಮಳೆ ಆಗಿದೆ. ಇನ್ನು ಕೆಲವು ದಿನಗಳ ಕಾಲ ನಗರದಲ್ಲಿ ಮಳೆಗಾಲದ ಸ್ಥಿತಿ ಕಂಡು ಬರಲಿದೆ.
Chamarajapete #RHRN#BengaluruRains pic.twitter.com/FpWS8DT4fi
— Uppittoo 3.0 (@chauchaubhath) May 2, 2025
ಬೆಂಗಳೂರಲ್ಲಿ ಗಾಳಿ ಮಳೆ: ಬಿಬಿಎಂಪಿ ಮನವಿ
ಬೆಂಗಳೂರಿನಾದ್ಯಂತ ಮೇ 01 ರಂದು ಸಂಜೆ ಸುರಿದ ಮಳೆಗೆ ಪಾಲಿಕೆಯ ದಕ್ಷಿಣ ವಲಯ ವ್ಯಾಪ್ತಿಯಲ್ಲಿನ ಕತ್ರಿಗುಪ್ಪೆ ಗೋ-ಗ್ಯಾಸ್ ಬಂಕ್‌ನ ಸಮೀಪ ನಿಂತಿದ್ದ ಆಟೋ ಹಾಗೂ ಎರಡು ಕಾರುಗಳ ಮೇಲೆ ಒಂದು ಬೃಹತ್ ಮರವು ಮುರಿದು ಬಿದ್ದ ಪರಿಣಾಮ ಶ್ರೀ ಮಹೇಶ್ ಸುಮಾರು 40 ವರ್ಷ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪಾರಾಗಿದ್ದಾರೆ. ಗಾಳಿ ಮಳೆಗೆ ಎಲ್ಲಾ ವಲಯಗಳ ವ್ಯಾಪ್ತಿಯಲ್ಲಿ ಸುಮಾರು 23 ಮರಗಳು ಹಾಗೂ 52 ಬೃಹತ್ ರೆಂಬೆಗಳು ಬಿದ್ದಿರುವುದು ವರದಿಯಾಗಿರುತ್ತದೆ. ಅರಣ್ಯ ಘಟಕವು ಆಯಾ ವಲಯಗಳ ಅಧಿಕಾರಿಗಳೊಂದಿಗೆ ಜೊತೆಗೂಡಿ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಲಾಗಿರುತ್ತದೆ.
ಅರಣ್ಯ ವಿಭಾಗದ ವಿಷೇಶ ಆಯುಕ್ತರು, ಮತ್ತು ವಲಯ ಆಯುಕ್ತರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಸಿಬ್ಬಂದಿ ಜೊತೆಗೂಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಹೀಗೆ ಗಾಳಿ ಸಹಿತ ಜೋರು ಮಳೆ ಕಾರಣಕ್ಕೆ ಗಾಳಿ ಮಳೆ ಸಂಧರ್ಭದಲ್ಲಿ ಮರಗಳ ಕೆಳಗೆ ನಿಲ್ಲದಂತೆ ಸಾರ್ವಜನಿಕರಲ್ಲಿ ಬಿಬಿಎಂಪಿ ಮನವಿ ಮಾಡಿದೆ.












Click it and Unblock the Notifications