Bengaluru Rains: ನಗರದಲ್ಲಿ ಗುರುವಾರವು ಮುಂದುವರಿದ ಮಳೆ ಆರ್ಭಟ, ಹವಾಮಾನ ಮುನ್ಸೂಚನೆ
ಬೆಂಗಳೂರು, ಜೂನ್ 20: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದೆ. ಬೆಂಗಳೂರಿನಲ್ಲಿ ಗುರುವಾರ ಮಟ ಮಟ ಮಧ್ಯಾಹ್ನವೇ ಜೋರು ಮಳೆ ದಾಖಲಾಗಿದೆ. ಒಂದೆಡೆ ಬಿಸಿಲು ಮತ್ತೊಂದೆಡೆ ವ್ಯಾಪಕ ಮಳೆ ಆಗಿದೆ. ಸಂಪಂಗಿರಾಮನಗರ, ಪೀಣ್ಯದಲ್ಲಿ ಹೆಚ್ಚು ಮಳೆ ಆಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಮಾಹಿತಿ ಪ್ರಕಾರ, ಇಂದು ನಗರದ ಹಲವೆಡೆ ಜೋರು ಮಳೆ ಆಗಿದೆ. ಸಂಪಂಗಿರಾಮನಗರದಲ್ಲಿ 15 ಮಿಲಿ ಮೀಟರ್, ಪೀಣ್ಯದಲ್ಲಿ 10ಮಿಲಿಮೀಟರ್ ಮಳೆ ಆಗಿದೆ. ಉಳಿದಂತೆ ಹಗುರ ಮಳೆ ಕಂಡು ಬಂದಿದೆ.

ಮೆಜೆಸ್ಟಿಕ್, ಚಾಮರಾಜಪೇಟೆ, ಶೇಷಾದ್ರಿಪುರಂ, ಮಲ್ಲೇಶ್ವರಂ, ಚಾಮರಾಜಪೇಟೆ, ಮಾಗಡಿ ರಸ್ತೆ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆ ಆಗಿದೆ. ಇದರಿಂದ ಕೆಲವೆಡೆ ರಸ್ತೆಗಳಲ್ಲಿ ನೀರು ನಿಂತು ಸಮಸ್ಯೆ ಆಯಿತು.
ಜಿಟಿ ಜಿಟಿ ಮಳೆಗೆ ಸಾರ್ವಜನಿಕರಿಗೆ ತೊಂದರೆ
ಇನ್ನೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಮೆಜೆಸ್ಟಿಕ್ ಬಸ್ ನಿಲ್ದಾಣಗಳಲ್ಲಿ ರೈಲು ಮತ್ತು ಬಸ್ ಏರಲು ಬ್ಯಾಗ್ ಸಮೇತ ಬಂದಿದ್ದ ಪ್ರಯಾಣಿಕರು ಮಳೆಯಿಂದ ತೊಂದರೆ ಅನುಭವಿಸಿದರು. ಮಧ್ಯಾಹ್ನ ಕೆಲ ಹೊತ್ತು ಜಿಟಿ ಜಿಟಿ ಮಳೆ ದಾಖಲಾಯಿತು. ಈ ಮಳೆ ಮುಂದಿನ ಇನ್ನೂ ಕೆಲವು ದಿನ ಮುಂದುವರಿಯಲಿದೆ.
ಸದ್ಯ ಕೋರಮಂಗಲ, ಮಾರತ್ತಹಳ್ಳಿ, ಯಲಹಂಕ ಭಾಗದಲ್ಲಿ ಬಿಸಿಲಿನ ವಾತಾವರಣ, ಆಗಾಗ ಮಬ್ಬು ವಾತಾವರಣ ಕಂಡು ಬಂತು. ಆದರೆ ಮಳೆ ಆಗಲಿಲ್ಲ. ಈ ಸ್ಥಿತಿ ನೋಡಿದರೆ, ಅರ್ಧ ಬೆಂಗಳೂರಿಗೆ ಸಾಮಾನ್ಯ ಮಳೆ ಆಗಿದೆ.

ಜೂನ್ 26ರವರೆಗೆ ಅತ್ಯಧಿಕ ಮಳೆ?
ಇನ್ನೂ ಜೂನ್ 26ರವರೆಗೆ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ. ಕೆಲವೊಮ್ಮ ವ್ಯಾಪಕ ಮಳೆ ಬರುವ ಸಾಧ್ಯತೆ ಇದೆ. ಈ ವೇಳೆ ಗರಿಷ್ಠ ತಾಪಮಾನ 30-31 ಹಾಗೂ ಕನಿಷ್ಠ 20-21 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಸುಮಾರು ಎಂಟು ಜಿಲ್ಲೆಗಳಲ್ಲಿ ಇದೇ ಜೂನ್ 24ರಂದು ಧಾರಾಕಾರ ಮಳೆ ಆಗಲಿದೆ. ಈ ಸಂಬಂಧ ರೆಡ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications