Bengaluru: ಉಡುಪಿ ಮೂಲದ ಒಂದೇ ಕುಟುಂಬದ ಮೂವರು ಬೆಂಗಳೂರಿನಲ್ಲಿ ನಿಗೂಢ ಸಾವು
ಬೆಂಗಳೂರು, ಮಾರ್ಚ್ 20: ಒಂದೇ ಕುಟುಂಬದ ಮೂವರು ಸಾವಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಜೆ.ಪಿ.ನಗರದ 3ನೇ ಹಂತದಲ್ಲಿ ನಡೆದಿದೆ. ಉಡುಪಿ ಮೂಲದ ತಾಯಿ ಸುಕನ್ಯಾ (48) ಮಕ್ಕಳಾದ ನಿಖಿತ್ (28) ಹಾಗೂ ನಿಶಿತ್ (28) ಸಾವಿಗೆ ಶರಣಾದವರು ಎಂದು ಗುರುತಿಸಲಾಗಿದೆ.
ಉಡುಪಿ ಮೂಲದ ಅಂಬಲಪಾಡಿ ನಿವಾಸಿಗಳಾಗಿರುವ ಕುಟುಂಬ ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಾಗಿದ್ದರು. ನಿನ್ನೆ (ಮಾರ್ಚ್ 19) ಮಂಗಳವಾರ ಸುಕನ್ಯಾ ಅವರ ಪತಿ ಇಲ್ಲದ ಸಮಯದಲ್ಲಿ ಬ್ಯಾಂಕ್ ಸಿಬ್ಬಂದಿ ಸಾಲ ವಾಪಾಸ್ ಕೇಳಿ ಮನೆ ಬಳಿಗೆ ಬಂದಿದ್ದರು ಎನ್ನಲಾಗಿದೆ. ಇದರಿಂದ ಮನನೊಂದು ಸುಕನ್ಯಾ, ನಿಖಿತ್ ಹಾಗೂ ನಿಶಿತ್ ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇಂದು ಮೃತದೇಹಗಳು ಸುಟ್ಟಿರುವ ರೀತಿಯಲ್ಲಿ ಪತ್ತೆಯಾಗಿದ್ದು, ಮೂವರ ನಿಗೂಢ ಸಾವಿಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಜೆ.ಪಿ.ನಗರ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೂವರ ಸಾವಿನ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೃತರ ಸಂಬಂಧಿಕರು ಹಾಗೂ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೇ ಘಟನಾ ಸ್ಥಳಕ್ಕೆ ಎಫ್ಎಸ್ಎಲ್ ಸಿಬ್ಬಂದಿ ಮತ್ತು ಸೋಕೋ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಡಗಿನಲ್ಲಿ ಗುಂಡು ಹಾರಿ ವ್ಯಕ್ತಿ ಸಾವು
ಕೊಡಗು: ರೈಫಲ್ನಿಂದ ಗುಂಡು ಹಾರಿ ವ್ಯಕ್ತಿ ಮೃತಪಟ್ಟಿರುವ ಘಟನೆ ಕೊಡಗು-ಮೈಸೂರು ಗಡಿ ಗ್ರಾಮ ಗಿರಗೂರಿನಲ್ಲಿ ನಡೆದಿದೆ. ಕುಶಾಲನಗರದ ಹಾರಂಗಿ ನಿವಾಸಿ ಸಂತೋಷ್ (34) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಕಾವೇರಿ ನದಿ ಬಳಿಕ ಮೀನುಗಾರಿಕೆಗೆ ತೆರಳಿದ್ದಾಗ ಘಟನೆ ಸಂಭವಿಸಿದೆ. ರೈಫಲ್ನಿಂದ ಗುಂಡು ಹಾರಿದ್ದು, ಸಂತೋಷ್ ತಲೆಗೆ ಗುಂಡೇಟು ತಾಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಶಾಲನಗರ ಟೌನ್ ಮತ್ತು ಬೈಲುಕುಪ್ಪೆ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಮೃತ ಸಂತೋಷ್ ಜೊತೆಗಿದ್ದ ರವಿ, ನೂತನ್, ಶರತ್ ಎನ್ನುವಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications