ಪೊಲೀಸಪ್ಪನ ಪತ್ನಿ ಕೊರಳಿಗೆ ಕೈ ಹಾಕಿದ ಸರಗಳ್ಳ
ಬೆಂಗಳೂರು, ಜನವರಿ 15: ಪೀಣ್ಯದ ಎಚ್ಎಂಟಿ ಬಡಾವಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಪತ್ನಿ ಕೊರಳಲ್ಲಿದ್ದ ಚಿನ್ನದ ಸರವನ್ನು ಸರಗಳ್ಳನೊಬ್ಬ ಕಿತ್ತುಕೊಂಡು ಹೋಗಿದ್ದಾನೆ.
ಇನ್ಸ್ಪೆಕ್ಟರ್ ಕೆಂಚೇಗೌಡ ಪತ್ನಿ ಗಂಗಮ್ಮ ತೀರ್ವ ಪ್ರತಿರೋಧ ಒಡ್ಡಿದರೂ ಕೂಡ ಅಮಾನುಷವಾಗಿ ಆಕೆಯನ್ನು ಕೆಳಕ್ಕೆ ಬೀಳಿಸಿ ಕತ್ತಿನ ಸರ ಕಿತ್ತುಕೊಂಡು ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.
ಸರಗಳ್ಳನನ್ನು 1.5 ಕಿ.ಮೀ ಬೆನ್ನುಹತ್ತಿದೆ ಆದರೆ ತಪ್ಪಿಸಿಕೊಂಡು ಬಿಟ್ಟ ಎಂದು ಇನ್ಸ್ಪೆಕ್ಟರ್ ಕೆಂಚೇಗೌಡ ಅವರು ಹೇಳಿದ್ದಾರೆ. ಕೆಂಚೇಗೌಡ ಅವರು ಪ್ರಕರಣ ದಾಖಲಿಸಿದ್ದಾರೆ.

15 ಗಂಟೆ ಅವಧಿಯಲ್ಲಿ ಬೆಂಗಳೂರಿನಲ್ಲಿ ಮೂರು ಸರಗಳ್ಳತನ ಪ್ರಕರಣಗಳು ದಾಖಲಾಗಿದ್ದು, ಪೀಣ್ಯದಲ್ಲಿ ಎರಡು ಮತ್ತು ಬಗಲಗುಂಟೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕುಖ್ಯಾತ ಸರಗಳ್ಳರ ತಂಡ ಇರಾನಿ ಗ್ಯಾಂಗ್ ಈ ಸರಗಳ್ಳತನ ಮಾಡಿವೆ ಎಂದು ಅನುಮಾನಿಸಲಾಗಿದೆ.
ಇರಾನಿ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಿದ್ದೇವೆ, ಸ್ಥಳೀಯ ಸರಗಳ್ಳರನ್ನೂ ಬಂಧಿಸಿದ್ದೇವೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು, ಆದರೆ ಈಗ ಮತ್ತೆ ಸರಗಳ್ಳತನ ಆಗಿರುವುದು ನಗರವಾಸಿಗಳ ಆತಂಕಕ್ಕೆ ಕಾರಣವಾಗಿದೆ.
ನಗರದಲ್ಲಿ ಮತ್ತೆ ಆತಂಕ ಸೃಷ್ಠಿಸಿರುವ ಸರಗಳ್ಳತನವನ್ನು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದು, ಶೀಘ್ರವಾಗಿ ಆರೋಪಿಗಳ ಪತ್ತೆಮಾಡುವಂತೆ ಸೂಚಿಸಿದ್ದಾರೆ.
ಪೊಲೀಸರು ನಗರದೆಲ್ಲೆಡೆ ನಾಕಾಬಂಧಿ ಹಾಕಿದ್ದು, ಸರಗಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications