ತೃತೀಯ ರಂಗ ರಚನೆಗೆ ನಿತೀಶ್ ಕುಮಾರ್ ಸಾರಥ್ಯ
ಬೆಂಗಳೂರು, ಡಿ. 30 : ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ದೇಶದಲ್ಲಿ ಎನ್ ಡಿಎ ಮತ್ತು ಯುಪಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ತೃತೀಯರಂಗ ಅಸ್ತಿತ್ವಕ್ಕೆ ಬರಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತೃತೀಯ ರಂಗ ರಚಿಸುವ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಷ್ಫಕ್ ಅಹಮದ್ ಖಾನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆಗೆ ಯುಪಿಎ ಮತ್ತು ಎನ್ ಡಿಎ ಮೈತ್ರಿ ಕೂಟಕ್ಕೆ ಪರ್ಯಾಯವಾಗಿ ದೇಶದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರಲಿದೆ. ನಿತೀಶ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದು, ಈಗಾಗಲೇ 17 ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದಾರೆ ಎಂದರು. [ಥರ್ಡ್ ಫ್ರಂಟ್ ಕನಸು: ಕೋಮುಭಾವ ವಿರುದ್ಧ ಹೋರಾಟ]

ಎಡಪಂಥೀಯರು ಕಾಂಗ್ರೆಸ್ ಮತ್ತು ಬಿಜೆಪಿಯನ್ನು ವಿರೋಧಿಸುತ್ತಾರೆ. ಅವರು ತೃತೀಯ ರಂಗಕ್ಕೆ ಬೆಂಬಲ ನೀಡಲಿದ್ದಾರೆ. ಎಲ್ಲಾ ಪಕ್ಷಗಳು ತೃತೀಯ ರಂಗ ರಚನೆಗೆ ಒಲವು ತೋರಿದ್ದು, ಚುನಾವಣೆಯನ್ನು ಒಟ್ಟಾಗಿ ಎದುರಿಸಲಿದ್ದೇವೆ ಎಂದು ಹೇಳಿದರು.
ತೃತೀಯ ರಂಗದ ಎಲ್ಲಾ ಪಕ್ಷಗಳು ಒಪ್ಪುವಂತಹ ಏಕರೂಪದ ಪ್ರಣಾಳಿಕೆಯನ್ನು ಸಿದ್ಧಪಡಿಸುತ್ತಿದ್ದು, ಇದನ್ನು ಚುನಾವಣಾ ಪ್ರಚಾರದ ಸಮಯದಲ್ಲಿ ಜನರ ಮುಂದಿಡುತ್ತೇವೆ. ಎನ್ ಡಿಎ ಮೈತ್ರಿ ಕೂಟದಿಂದ ಹೊರಬಂದ ಮೇಲೆ ಜೆಡಿಯು ಶಕ್ತ ಕಡಿಮೆ ಆಗಿಲ್ಲ, ಮತ್ತಷ್ಟು ವೃದ್ಧಿಸಿದೆ. ಬಿಹಾರದಲ್ಲಿಯೇ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ತೃತೀಯ ರಂಗಗಳಿಸಲಿದೆ ಎಂದು ವಿಶ್ವಾಶ ವ್ಯಕ್ತಪಡಿಸಿದರು.
ಬಿಹಾರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ತನ್ನ ಮಾತನ್ನು ಉಳಿಸಿಕೊಂಡಿಲ್ಲ. ಲಾಲು ಪ್ರಸಾದ್ ಯಾದವ್ ಅವರ ಕುತಂತ್ರವೂ ಇದಕ್ಕೆ ಕಾರಣವಾಗಿದೆ. ತೃತೀಯ ರಂಗದೊಂದಿಗೆ ಲೋಕಜನಶಕ್ತಿ ಪಕ್ಷದ ರಾಮ್ ವಿಲಾಸ್ ಪಾಸ್ವಾನ್ ಸಹ ಕೈ ಜೋಡಿಸಲಿದ್ದಾರೆ ಎಂದು ಅಹಮದ್ ಖಾನ್ ಹೇಳಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ಒಟ್ಟಾಗಿ ಎದುರಿಸುವುದು ತೃತೀಯ ರಂಗದ ಮುಖ್ಯ ಧ್ಯೇಯವಾಗಿದೆ. ರಂಗದಲ್ಲಿರುವ ಎಲ್ಲಾ ಪಕ್ಷಗಳ ಮನಸ್ಥಿತಿ ಒಂದೇ ಆಗಿದ್ದು, ಇದು ಚುನಾವಣೆ ವೇಳೆ ಸಹಕಾರಿಯಾಗಲಿದೆ ಎಂದರು. ಈ ಮೂಲಕ ದೇಶದಲ್ಲಿ ತೃತೀಯ ರಂಗ ಅಸ್ತಿತ್ವಕ್ಕೆ ಬರುವುದು ಖಚಿತ ಎಂದರು.











Click it and Unblock the Notifications