ವ್ಯಾಪಾರ ಪಕ್ಕಕ್ಕಿಟ್ಟು ಮಾನವೀಯತೆ ಮೆರೆದ 'ರೈಲ್ ಕೆಫೆ' ತಂಡ
ಬೆಂಗಳೂರು, ಏಪ್ರಿಲ್ 17: ಲಾಕ್‌ಡೌನ್ ಕಾರಣದಿಂದ ಇಡೀ ದೇಶದಲ್ಲಿ ಉದ್ಯಮ ಬಂದ್ ಆಗಿದೆ. ಅದರಲ್ಲೂ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೂ, ರಾಜ ರಾಜೇಶ್ವರಿ ನಗರದಲ್ಲಿರುವ 'ರೈಲ್ ಕೆಫೆ' ಮಾತ್ರ ಕಾರ್ಯ ನಿರ್ವಹಿಸುತ್ತಿದೆ.
Recommended Video
ಅಂದ್ಹಾಗೆ, 'ರೈಲ್ ಕೆಫೆ' ಯಾವುದೇ ವ್ಯಾಪಾರ ಮಾಡುತ್ತಿಲ್ಲ, ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವವರಿಗೆ, ಹಸಿದವರಿಗೆ, ನಿರ್ಗತಿಕರಿಗೆ, ಬಡವರಿಗೆ ಒಂದೊತ್ತಿನ ದಾಸೋಹ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದೆ.
ಹೌದು, ನಾಗಾರ್ಜುನ ಮತ್ತು ಪವನ್ ಎಂಬ ಕೆಫೆ ಮಾಲೀಕರು ಒಂದು ಎನ್.ಜಿ.ಒ ಸಂಸ್ಥೆಯೊಂದಿಗೆ ಕೈಜೋಡಿಸಿ ಪ್ರತಿನಿತ್ಯ ಊಟದ ಅವಶ್ಯಕತೆ ಇರುವ ಜನರಿಗೆ ಆಹಾರ ಒದಗಿಸುತ್ತಿದ್ದಾರೆ.

ಕಳೆದ 18 ದಿನಗಳಿಂದ ರೈಲ್ ಕೆಫೆ ಈ ಕೆಲಸ ಮಾಡುತ್ತಿದ್ದು, ಪ್ರತಿದಿನ 4500 ಜನರಿಗೆ ಆಗುವಷ್ಟು ಊಟವನ್ನು ತಯಾರಿಸಿ, ಅವರ ಸ್ಥಳಕ್ಕೆ ಹೋಗಿ ಹಂಚಲಾಗುತ್ತಿದೆ. ಈ ಕುರಿತು ಒನ್ ಇಂಡಿಯಾ ವರದಿ ಮಾಡಿದ್ದು, ಖುದ್ದು ನಮ್ಮ ರಿಪೋಟರ್ ಮಂಜುನಾಥ್ ಜೊತೆ ರೈಲ್ ಕೆಫೆ ಮಾತನಾಡಿದ್ದಾರೆ.
'ಲಾಕ್‌ಡೌನ್ ಎರಡು ತಿಂಗಳು ಇರಬಹುದು ಅಥವಾ ಮೂರು ತಿಂಗಳು ಇರಬಹುದು. ಅಲ್ಲಿಯವರೆಗೂ ಈ ಕೆಫೆ ಮುಚ್ಚುವ ಬದಲು ಇಂತಹ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂಬುದು ನಮಗೆ ಸಂತಸ ತಂದಿದೆ' ಎಂದು ನಾಗಾರ್ಜುನ ಮತ್ತು ಪವನ್ ಹೇಳಿದ್ದಾರೆ.

ಆರಂಭದಲ್ಲಿ ತಮ್ಮ ಮನೆಗಳಿಂದಲೇ ತರಕಾರಿ, ಅಕ್ಕಿ, ಬೇಳೆ ಎಲ್ಲವೂ ತಂದು ಊಟ ಮಾಡಲು ಶುರು ಮಾಡಿದೆವು. ಸುಮಾರು 500-600 ಜನಕ್ಕೆ ಹಂಚಲಾಯಿತು. ಇದೀಗ, ಹಲವರು ಸ್ವ-ಇಚ್ಛೆಯಿಂದ ನಾವು ನಿಮ್ಮ ಜೊತೆ ಕೈಜೋಡಿಸುತ್ತೇವೆ ಎಂದು ಕೆಲವು ಅಗತ್ಯ ವಸ್ತುಗಳನ್ನು ತಂದುಕೊಡುತ್ತಿದ್ದಾರೆ. ಇನ್ನು ಕೆಲವರು ಖುದ್ದು ಅವರೇ ಬಂದು ಕೆಲಸ ಮಾಡುತ್ತಿದ್ದಾರೆ' ಎಂದು ಎನ್.ಜಿ.ಒ ಮುಖ್ಯಸ್ಥ ತಿಳಿಸಿದ್ದಾರೆ.
ಒಟ್ನಲ್ಲಿ, ಲಾಕ್‌ಡೌನ್‌ನಿಂದ ಊಟವಿಲ್ಲದೇ ಹಸಿದುಕೊಂಡಿರುವ ಅನೇಕರಿಗೆ ರೈಲ್ ಕೆಫೆ ಮೂಲಕ ಒಂದೊತ್ತಿನ ಊಟ ಸಿಗುತ್ತಿರುವುದು ಖುಷಿಯ ವಿಚಾರ.












Click it and Unblock the Notifications