ಶಾಸಕ ಮುನಿರತ್ನ ವಿರುದ್ಧ ದೂರು; ಶಾಕಿಂಗ್ ಹೇಳಿಕೆ ಕೊಟ್ಟ ಗುತ್ತಿಗೆದಾರ
ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧ ಗುತ್ತಿಗೆದಾರರೊಬ್ಬರು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಅವರಿಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಮುನಿರತ್ನ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿತ್ತು. ಇದಾದ ನಂತರ ಮುನಿರತ್ನ ಅವರು ಗುತ್ತಿಗೆದಾರನಿಗೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮುನಿರತ್ನ ಅವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಅವರ ವಿರುದ್ಧ ಕೈಗೊಳ್ಳಬೇಕು, ನನಗೆ ರಕ್ಷಣೆ ನೀಡಬೇಕೆಂದು ಗುತ್ತಿಗೆದಾರ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಕಸದ ಗುತ್ತಿಗೆ ನೀಡುವ ವಿಚಾರವಾಗಿ ಶಾಸಕ ಮುನಿರತ್ನ ಅವರ ನನ್ನನ್ನು ಕರೆದು ಬೆದರಿಕೆ ಹಾಕಿದ್ದಾರೆ. 20 ಲಕ್ಷ ಲಂಚ ಕೂಡ ಕೇಳಿದ್ದರು. ನಾನು ಆತ್ಮಹತ್ಯೆಗೂ ಪ್ರಯತ್ನಿಸಿದೆ, ಆದರೆ ನನ್ನ ಕುಟುಂಬದವರಿಗಾಗಿ ಉಳಿದುಕೊಂಡಿದ್ದೇನೆ ಎಂದು ಗುತ್ತಿಗೆದಾರ ಹೇಳಿದ್ದಾರೆ.
ಮುನಿರತ್ನ ಅವರ ಆಪ್ತನಾದ ವಸಂತ್ ಕುಮಾರ್ ಎಂಬುವರು ಲಂಚದ ಹಣ ವಸೂಲಿ ವಿಚಾರವಾಗಿ ಸಿಕ್ಕಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಅಲ್ಲದೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ಎಂದು ಬೆದರಿಕೆ ಕೂಡ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಶಾಸಕ ಮುನಿರತ್ನ ಅವರ ಬಗ್ಗೆ ನೀನು ಲೋಕಾಯುಕ್ತಕ್ಕೆ ದೂರು ಕೊಡಲು ಮುಂದಾಗಿರುವ ವಿಚಾರ ನಮಗೆ ಗೊತ್ತಾಗಿದೆ. ರೇಣುಕಾಸ್ವಾಮಿಗೆ ಆ ಗತಿ ತಂದಿದ್ದು ನಮ್ಮ ಸಾಹೇಬರ ಸಂಬಂಧಿ. ನಿನಗೂ ಅದೇ ಗತಿ ಆಗುತ್ತೆ ನೋಡ್ಕೋʼ ಎಂದು ವಾರ್ನಿಂಗ್ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ.
ಸದ್ಯ ಈ ವಿಚಾರವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಮತ್ತೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ರಾಜಕಾರಣಿಗಳ ಪಾತ್ರವಿದೆಯೇ? ಎನ್ನುವ ಅನುಮಾನವನ್ನೂ ಹುಟ್ಟುಹಾಕಿದೆ. ಗುತ್ತಿಗೆದಾರ ಹೇಳಿರುವಂತೆ ಶಾಸಕ ಮುನಿರತ್ನ ಅವರ ಆಪ್ತ ತನ್ನ ಬಳಿ ಮಾತನಾಡುವಾಗ, ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನೂ ಸಾರ್ವಜನಿಕವಾಗಿ ಉಲ್ಲೇಖಿಸಿದ್ದಾನೆ.
'ಅಲ್ಲದೆ, ರೇಣುಕಾಸ್ವಾಮಿ ಕೊಲೆ ಮಾಡಿಸಿದ್ದು ಇವರೇ ಎಂದೂ ಬೊಟ್ಟು ಮಾಡಿ ಹೇಳಿದ್ದಾನೆ. ಕೊನೆಗೆ ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ' ಎಂದು ಧಮ್ಕಿ ಹಾಕಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಆಡಿಯೋದಲ್ಲಿ ಏನಿದೆ?: 'ಶಾಸಕ ಮುನಿರತ್ನ ಅವರು ಹಣ ವಸೂಲಿ ಮಾಡಲು ಜಾತಿ ನಿಂದಿಸಿದ್ದಾರೆ. ನನ್ನ ಹೆಂಡತಿ ಮತ್ತು ತಾಯಿ ಬಗ್ಗೆ ಅಶ್ಲೀಲವಾಗಿ ಮಾತನಾಡಿ, ಜೀವ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿ ಗುತ್ತಿಗೆದಾರ ಚಲುವರಾಜು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಜೊತೆಗೆ ಮುನಿರತ್ನ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.
'ನಾನು ಪೌರ ಕಾರ್ಮಿಕನಾಗಿ ಕೆಲಸ ಆರಂಭಿಸಿದವನು ಇಂದು ವಾರ್ಡ್ ಗುತ್ತಿಗೆದಾರನಾಗಿದ್ದೇನೆ. ಶಾಸಕ ಮುನಿರತ್ನ ಮತ್ತು ಅವರ ಪಿಎ ನನಗೆ ಫೋನ್ ಮಾಡಿ, ಅವಾಜ್ ಹಾಕಿದ್ದಾರೆ. ಸಭೆ ಕರೆದು ಎಲ್ಲರೆದುರು ನನ್ನನ್ನು ಬೈದಿದ್ದಾರೆ. ಅವರು 36 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದರು. ನಾನು 15 ಲಕ್ಷ ಕೊಡುವುದಾಗಿ ಹೇಳಿದ್ದೆ' ಎಂದು ಗುತ್ತಿಗೆದಾರ ಆರೋಪ ಮಾಡಿದ್ದಾರೆ. ಆದರೆ, ಈ ಬಗ್ಗೆ ಶಾಸಕ ಮುನಿರತ್ನ ಅವರು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications