Hoysala Police: ಸರಿಯಾದ ಸಮಯಕ್ಕೆ ವಿದ್ಯಾರ್ಥಿಯನ್ನು ಪರೀಕ್ಷಾ ಕೇಂದ್ರಕ್ಕೆ ಸೇರಿಸಿದ ಹೊಯ್ಸಳ ಸಿಬ್ಬಂದಿ
ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಸರಿಯಾದ ಸಮಯಕ್ಕೆ ತಲುಪಲಾಗದೆ ಪರೀಕ್ಷೆಯನ್ನೇ ಕಳೆದುಕೊಳ್ಳುವ ಭಯದಲ್ಲಿದ್ದ ವಿದ್ಯಾರ್ಥಿಗೆ ಹೊಯ್ಸಳ ಸಿಬ್ಬಂದಿ ಆಸರೆಯಾಗಿದ್ದಾರೆ. ಸೈರನ್ ಹಾಕಿಕೊಂಡು ಸರಿಯಾದ ಸಮಯಕ್ಕೆ ವಿದ್ಯಾರ್ಥಿಯನ್ನು ಸಿಇಟಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಶನಿವಾರ ಸಿದ್ದರಾಮಯ್ಯ ಅವರ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ಭಾರಿ ಟ್ರಾಫಿಕ್ ಉಂಟಾಗಿತ್ತು, ಇದರೊಂದಿಗೆ ಪರೀಕ್ಷಾ ಕೇಂದ್ರ ಸಮಯಕ್ಕೆ ಸರಿಯಾಗಿ ಹೋಗಲು ಸಾಧ್ಯವಾಗುವುದಿಲ್ಲ ಎಂದು ವಿದ್ಯಾರ್ಥಿಯೊಬ್ಬ ನೊಂದಿದ್ದ, ವಿದ್ಯಾರ್ಥಿಯನ್ನು ಗಮನಿಸಿದ ಪೊಲೀಸರು ಆತನನ್ನು ವಿಚಾರಿಸಿದಾಗ, ಸಿಇಟಿ ಪರೀಕ್ಷೆ ಬರೆಯಲು ಹೋಗುತ್ತಿದ್ದು, ಟ್ರಾಫಿಕ್‌ನಿಂದ ತಡವಾಗುತ್ತಿದೆ ಎಂದು ಅಸಹಾಯಕತೆ ಹೇಳಿಕೊಂಡಿದ್ದ.

ವಿದ್ಯಾರ್ಥಿಗೆ ಧೈರ್ಯ ಹೇಳಿದ ಪೊಲೀಸರು ಹೊಯ್ಸಳ ವಾಹನದಲ್ಲಿ ಕಳುಹಿಸಿಕೊಟ್ಟರಿ. ಸೈರನ್ ಹಾಕಿಕೊಂಡ ಹೊಯ್ಸಳ ವಾಹನ ಸಿಬ್ಬಂದಿ ಕೇವಲ 15 ನಿಮಿಷದಲ್ಲಿ ಕೋರಮಂಗಲದ ಜೆ.ಎನ್.ಸಿ ಕಾಲೇಜಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿ ಸಮಯಕ್ಕೆ ಸರಿಯಾಗಿ ಪರೀಕ್ಷೆಗೆ ಹಾಜರಾಗುವಂತಾಯಿತು.
ಕೊತ್ತನೂರಿನ ಹೊಯ್ಸಳ ಸಿಬ್ಬಂದಿ ಗೌರಿಶ್ ಹಾಗೂ ಸೋಮಶೇಖರ್ ಅವರೇ ವಿದ್ಯಾರ್ಥಿಯನ್ನು ಸಮಯಕ್ಕೆ ಸರಿಯಾಗಿ ತಲುಪಿಸಿದವರು, ಇವರ ಕಾರ್ಯಕ್ಕೆ ಸಾರ್ವಜನಿಕರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿ ಕೂಡ ಹೊಯ್ಸಳ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾನೆ.
ಹೊಯ್ಸಳ ಸಿಬ್ಬಂದಿ ವಿಡಿಯೋ ಮೂಲಕ ಸಂದೇಶ ನೀಡಿದ್ದು, ಜನರ ಸೇವೆಗೆ ತಾವು ಸದಾ ಸಿದ್ದವಾಗಿದ್ದೇವೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಾಗಿ ಸೈರನ್ ಹಾಕಿಕೊಂಡು ಸರಿಯಾದ ಸಮಯಕ್ಕೆ ಪರೀಕ್ಷಾ ಕೇಂದ್ರ ತಲುಪಿಸಿದ ಪೊಲೀಸರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸರು ಸದಾಕಾಲ ಹೀಗೆ ಜನಸ್ನೇಹಿಯಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications