ಕರ್ನಾಟಕದ 5 ಜಿಲ್ಲೆಗಳಿಗೆ ಬಿಸಿ ಗಾಳಿ ಭೀತಿ, ಬಿಸಿಲಿನಿಂದ ರಕ್ಷಣೆ ಹೇಗೆ?
ಬೆಂಗಳೂರು, ಜೂನ್ 1: ಕರ್ನಾಟಕದ ಒಟ್ಟು ಐದು ಜಿಲ್ಲೆಗಳಲ್ಲಿ ಬಿಸಿಗಾಳಿ ಭೀತಿ ಎದುರಾಗಿದೆ. ಈಗಾಗಲೇ ಮಳೆಯಿಲ್ಲದೆ ಬರ ಎದುರಿಸುತ್ತಿರುವ ಜಿಲ್ಲೆಗಳಲ್ಲಿ ಬಿಸಿಗಾಳಿಯಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಚೂರು, ಕಲಬುರಗಿ, ಬಾಗಲಕೋಟೆ, ವಿಜಯಪುರ , ಬೆಳಗಾವಿಯಲ್ಲಿ ಜೂನ್ 5ರವರೆಗೆ ಬಿಸಿಗಾಳಿ ಕಾಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಳೆದ ಒಂದು ತಿಂಗಳಿಂದೀಚೆಗೆ ಗರಿಷ್ಠ ತಾಪಮಾನ 43 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದು, ಕಲಬುರಗಿಯಲ್ಲಿ 44 ಡಿಗ್ರಿ ಸೆಲ್ಸಿಯಸ್ ಇದೆ.
ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಶುಕ್ರವಾರ 49.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. 75 ವರ್ಷಗಳ ಬಳಿಕ ಮೇ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪಮಾನ ಇದಾಗಿದೆ.
ಬಿಸಿಲಿನ ಪ್ರಖರತೆ ಹೆಚ್ಚುವ ಜೊತೆಗೆ ಬಿಸಿಗಾಳಿಯಿಂದಾಗಿ ಜನರು ತತ್ತರಿಸಿದ್ದಾರೆ. ಐದು ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಲಬುರಗಿಯಲ್ಲಿ ಒಂದೆಡೆ ಸೂರ್ಯನ ಪ್ರಖರತೆ ಹೆಚ್ಚಾಗಿದ್ದರೆ ಮತ್ತೊಂದೆಡೆ ರೆಡ್ ಅಲರ್ಟ್ ಎಂಬ ಸಂದೇಶಗಳು ಹರಿದಾಡುತ್ತಿದ್ದು ಆತಂಕದಲ್ಲಿದ್ದಾರೆ.
ಮೇನಲ್ಲಿ ಅತಿ ಹೆಚ್ಚು ಬಿಸಿಲು ಇದ್ದುದರಿಂದ ರಾಜ್ಯ ಸರ್ಕಾರವೇ ರೆಡ್ ಅಲರ್ಟ್ ಘೋಷಿಸಿದೆ. ಜೂನ್ 1ರಿಂದ 45ರಿಂದ 48 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಅನಿವಾರ್ಯ ಸಂದರ್ಭದಲ್ಲಿ ಛತ್ರಿ ಟೋಪಿ ಧರಿಸಿ ಓಡಾಡಿ, ಬೆಳಗ್ಗೆ11ರಿಂದ ಸಂಜೆ 4.30ರವರೆಗೂ ಬಿಸಿಲಿನಲ್ಲಿ ಓಡಾಡಬೇಡಿ. ನೀರಿನ ಬಾಟಲಿ ಕೈಯಲ್ಲಿರಲಿ, ತಂಪಾದ ಪಾನೀಯ ಸೇವನೆ ಬೇಡ, ಮಕ್ಕಳು ಬಿಸಿಲಿನಲ್ಲಿ ಆಟವಾಡುವುದನ್ನು ತಡೆಯಿರಿ.












Click it and Unblock the Notifications