Bengaluru: ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ: ನೋಂದಣಿಗಾಗಿ ಅರ್ಜಿ ನಮೂನೆ 18 ವಿತರಣೆ
ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರ ಪಟ್ಟಿಗೆ ನೋಂದಣಿ ಕುರಿತಂತೆ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಅರ್ಜಿ ನಮೂನೆ 18 ನೀಡಿದರು.
ಬೆಂಗಳೂರು ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಕ್ರಿಯೆಗಳು ಆರಂಭವಾಗಿವೆ. ಈ ಪೈಕಿ ಬೆಂಗಳೂರು ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಡಾ. ಕೆ ಹರೀಶ್ ಕುಮಾರ್ ಅವರು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರಿಗೆ ಅರ್ಜಿ ನಮೂನೆ 18 ವಿತರಣೆ ಮಾಡಿದರು.

ಅರ್ಹ ಪದವೀಧರರೆಲ್ಲರೂ ತಪ್ಪದೇ ಮತಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಪದವೀಧರ ಕ್ಷೇತ್ರದಲ್ಲಿ ಮತದಾರರು ಪಟ್ಟಿಯಲ್ಲಿ ಹೆಸರು ಸೇರಿಸಲು ಈ ಅರ್ಜಿ ನಮೂನೆ 18 ನೀಡಲಾಗಿದೆ.
ಚುನಾವಣೆ ಪಕ್ರಿಯೆ ಆರಂಭ
ಅರ್ಜಿ ಸ್ವೀಕಾರ, ಹೆಸರು ಸೇರಿಸುವ ಮತ್ತು ತೆಗೆಯುವ ಪ್ರಕ್ರಿಯೆ ಬಳಿಕ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಕರಡು ಮತದಾರರ ಪಟ್ಟಿ ಬಿಡುಗಡೆ ಮಾಡುತ್ತಾರೆ. ಈ ವೇಳೆಯೆ ಅದರಲ್ಲಿನ ಹೆಸರುಗಳು ತಪ್ಪಾಗಿದ್ದರೆ, ಬಿಟ್ಟು ಹೋಗಿದ್ದರೆ, ಇಲ್ಲವೇ ಇನ್ನಿತರ ತಿದ್ದುಪಡಿ ಸೇರಿದಂತೆ ಪಟ್ಟಿ ಕುರಿತು ಆಕ್ಷೇಪಣೆಗಳು ಇದ್ದರೆ ಅವುಗಳ ಸಲ್ಲಿಕೆಗೆ ಕಾಲಾವಕಾಶ ನೀಡಲಾಗುತ್ತದೆ.

ಬಳಿಕ ಆಕ್ಷೇಪಣೆಗಳ ಸಲ್ಲಿಕೆ ಮರುತ್ತರದ ಬಳಿಕ ಚುನಾವಣಾಧಿಕಾರಿಗಳು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯು 2024ರಲ್ಲಿ ಬಿಡುಗಡೆ ಆಗುವ ಸಾಧ್ಯತೆಗಳು ಇವೆ.
ಸದ್ಯ ಪದವೀಧರ ಕ್ಷೇತ್ರದಲ್ಲಿ ಚುನಾವಣೆ ಸಂಬಂಧಿ ಅರ್ಜಿ ನಮೂನೆ ವಿತರಿಸಲಾಗಿದೆ. ಇನ್ನೂ ಶಿಕ್ಷಕರ ಕ್ಷೇತ್ರದಲ್ಲಿನ ಮತದಾರರು ಅರ್ಜಿ ನಮೂನ್ 19 ಬಳಸಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಇದೆ. ಈ ಸಂಬಂಧ ಆಯೋಗ ಮಾಹಿತಿ ನೀಡಲಿದೆ.
ಕಾಂಗ್ರೆಸ್‌ನಿಂದ ಅಭ್ಯರ್ಥಿಗಳು ಫೈನಲ್
ಬೆಂಗಳೂರಿನ ಶಿಕ್ಷಕರ ಕ್ಷೇತ್ರ ಮತ್ತು ಪದವಿಧರರ ಕ್ಷೇತ್ರ ಚುನಾವಣೆ 2024 ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷ ಮಾತ್ರವೇ ತನ್ನ ಅಭ್ಯರ್ಥಿಗಳು ಆಯ್ಕೆ ಮಾಡಿದೆ. ಇದರ ಹೊರತು ಬೇರಾವ ಪಕ್ಷಗಳು ಇನ್ನೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತೀರ್ಮಾನಿಸಿಲ್ಲ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷ ಮಲಿಕ್ಕಾರ್ಜುನ ಖರ್ಗೆ ಅವರು, 'ಬೆಂಗಳೂರು ಪದವೀಧರ ಕ್ಷೇತ್ರಕ್ಕೆ 'ರಾಮೋಜಿ ಗೌಡ',
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ 'ಪುಟ್ಟಣ್ಣ', ಬೆಂಗಳೂರು ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 'ಕೆ.ಕೆ ಮಂಜುನಾಥ್', ಬೆಂಗಳೂರು ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ 'ಡಿಟಿ ಶ್ರೀನಿವಾಸ್' ಹಾಗೂ ಬೆಂಗಳೂರು ಈಶಾನ್ಯ ಪದವೀಧರ ಕ್ಷೇತ್ರಕ್ಕೆ 'ಚಂದ್ರಶೇಖರ್ ಬಿ.ಪಾಟೀಲ್' ಇವರನ್ನು ಆಯ್ಕೆ ಮಾಡಿ ಆದೇಶಿಸಿದ್ದಾರೆ.












Click it and Unblock the Notifications