ಡಿಕೆಶಿ ಮನೆಯಲ್ಲಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ SMK ಕುಟುಂಬ
ಬೆಂಗಳೂರು, ಜೂ. 15: ನಿನ್ನೆಯಷ್ಟೇ (ಜೂ.14) ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮನೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ಕಾರ್ಯಕ್ರಮ ನೆರವೇರಿಸಿತ್ತು. ಆ ಮೂಲಕ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್‌ಎಂಕೆ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮಾರ್ಥ್ಯ ಅವರ ವಿವಾಹಕ್ಕೆ ಮುನ್ನುಡಿ ಬರೆಯಲಾಗಿತ್ತು.
ವಿವಾಹ ಸಂಪ್ರದಾಯದ ಮುಂದುವರೆದ ಭಾಗವಾಗಿ ಇವತ್ತು ಸದಾಶಿವನರದಲ್ಲಿರುವ ಡಿಕೆಶಿ ನಿವಾಸಕ್ಕೆ ಹೆಣ್ಣು ನೋಡುವ ಶಾಸ್ತ್ರ ನೆರವೇರಿಸಲು ಮಾಜಿ ಸಿಎಂ ಎಸ್‌ಎಂಕೆ ಕುಟುಂಬ ತೆರಳಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರು ಹಾಗೂ ಅಮಾತ್ಯ ಅವರು ಸದಾಶಿವನಗರದಲ್ಲಿನ ಡಿ.ಕೆ. ಶಿವಕುಮಾರ್ ಮನೆಗೆ ತೆರಳಿದ್ದಾರೆ. ಇವತ್ತೆ ಐಶ್ವರ್ಯ ಹಾಗೂ ಅಮಾತ್ಯ ಅವರ ವಿವಾಹ ನಿಶ್ಚಿತಾರ್ಥದ ದಿನವನ್ನು ಇವತ್ತು ನಿಗದಿ ಮಾಡುತ್ತಾರೆ ಎಂಬ ಮಾಹಿತಿಯಿದೆ.

ಈ ಹಿಂದೆಯೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಆಪ್ತ ಬಳಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುತಿಸಿಕೊಂಡಿದ್ದರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದಿದ್ದಾಗ ಡಿ.ಕೆ. ಶಿವಕುಮಾರ್ ಅವರನ್ನು ಶಾಡೊ ಸಿಎಂ ಎಂದೇ ಕರೆಯಲಾಗುತ್ತಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ವೈಮನಸ್ಸಿನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್‌ಎಂಕೆ ಬಿಜೆಪಿ ಸೇರಿದ್ದರು.

ಕಾಂಗ್ರೆಸ್ ಪಕ್ಷವನ್ನು ಎಸ್.ಎಂ. ಕೃಷ್ಣ ಅವರು ತೊರೆದ ಮೇಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಸ್‌ಎಂಕೆ ಸಂಪರ್ಕ ಕಡಿದುಕೊಂಡಿರಲಿಲ್ಲ. ಎಸ್‌ಎಂಕೆ ಅಳಿಯ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಎಸ್‌ಎಂಕೆ ಅವರಿಗೆ ಧೈರ್ಯ ತುಂಬಿದ್ದು ಇದೇ ಡಿಕೆಶಿ. ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ರಾಜ್ಯದ ಎರಡು ಪ್ರಭಾವಿ ರಾಜಕೀಯ ಕುಟುಂಬಗಳು ವೈವಾಹಿಕ ಸಂಬಂಧ ಬೆಳೆಸಿವೆ.












Click it and Unblock the Notifications