ಕೆಪಿಎಸ್‍ಸಿ ಅಕ್ರಮ: ಕ್ರಮ ಕೈಗೊಳ್ಳಲು ಆಪ್ ಆಗ್ರಹ
ಬೆಂಗಳೂರು, ಮೇ 22 : ಕೆಪಿಎಸ್‍ಸಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿಗಳ ಕುರಿತು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ ನೀಡಿದ್ದರೂ ಸರ್ಕಾರ ಏಕೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಪ್ರಶ್ನಿದಿದೆ. ಕರ್ನಾಟಕ ಸರ್ಕಾರ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಹೋರಾಟ ನಡೆಸಲಾಗುವುದು ಎಂದು ಪಕ್ಷ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣಾ ರೆಡ್ಡಿ, 1988-89 ಮತ್ತು 2004ರಲ್ಲಿ ನಡೆದ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಅಕ್ರಮ ನಡೆದಿದೆ ಎಂದು ಸತ್ಯ ಶೋಧನಾ ಸಮಿತಿ ಮತ್ತು ಹೈಕೋರ್ಟ್ ಹೇಳಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆಯೂ ಸೂಚನೆ ನೀಡಿದೆ ಎಂದು ಹೇಳಿದರು. [ಕೆಪಿಎಸ್‍ಸಿ ಅಕ್ರಮ : ಆರೋಪಿಗಳನ್ನು ವಜಾಗೊಳಿಸಿ]

ಕೆಪಿಎಸ್‍ಸಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಕ್ರಮ ಕೈಗೊಳ್ಳಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದರೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಮೂಲಕ ಸರ್ಕಾರ ಭಷ್ಟರನ್ನು ರಕ್ಷಣೆ ಮಾಡುತ್ತಿದೆ ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದರು. [ಕೆಪಿಎಸ್‍ಸಿ ಹಗರಣದ ಚಾರ್ಚ್ ಶೀಟ್ ಸಲ್ಲಿಕೆ]
1988-89 ಮತ್ತು 2004ರಲ್ಲಿ ನಡೆದ ನೇಮಕಾತಿಯಲ್ಲಿ ಶೇ 20ಕ್ಕಿಂತ ಹೆಚ್ಚಿನ ಅಕ್ರಮ ನಡೆದಿದ್ದರೆ ಎಲ್ಲಾ ಅಧಿಕಾರಿಗಳನ್ನು ವಜಾ ಮಾಡಬೇಕು. ಸುಪ್ರೀಂಕೋರ್ಟ್ ಸಹ ತನ್ನ ತೀರ್ಪಿನಲ್ಲಿ ಶೇ 20ಕ್ಕಿಂತ ಅಕ್ರಮ ನಡೆದಿದ್ದರೆ ವಜಾ ಮಾಡಬಹದು ಎಂದು ಹೇಳಿದೆ. ಈ ಅವಧಿಯಲ್ಲಿ ನೇಮಕವಾದ ಹಲವು ಅಧಿಕಾರಿಗಳು ಸದ್ಯ ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ಕೆಪಿಎಸ್‍ಸಿಯಲ್ಲಿ ಅಧಿಕಾರದಲ್ಲಿರುವವರು ಅಕ್ರಮಗಳ ಮೂಲಕ ತಮಗೆ ಬೇಕಾದವರಿಗೆ ಉದ್ಯೋಗ ನೀಡುತ್ತಿದ್ದಾರೆ. ಆದ್ದರಿಂದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಕೆಪಿಎಸ್‍ಸಿ ನೇಮಕಾತಿಯಲ್ಲಿ ಬದಲಾವಣೆ ತಂದು ಅಭ್ಯರ್ಥಿಗಳಿಗೆ ಆಗುವ ಅನ್ಯಾಯ ತಪ್ಪಿಸಬೇಕೆಂದು ರವಿಕೃಷ್ಣಾ ರೆಡ್ಡಿ ಒತ್ತಾಯಿಸಿದರು.
ಕರ್ನಾಟಕ ಸರ್ಕಾರ ಕೆಪಿಎಸ್‍ಸಿಯಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ವಿಳಂಬ ಮಾಡಿ, ಭ್ರಷ್ಟರನ್ನು ರಕ್ಷಿಸಲು ಮುಂದಾದರೆ, ಆಮ್ ಆದ್ಮಿ ಪಕ್ಷ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಕೆ ನೀಡಿದರು.












Click it and Unblock the Notifications