ಕಳಂಕಿತರು ಯಾರು? ಸ್ಪಷ್ಟನೆ ಕೇಳಿದ ರಮೇಶ್ ಕುಮಾರ್

ವಿಧಾನಸೌಧದಲ್ಲಿ ಸೋಮಾರ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, "ಚುನಾವಣೆಯಲ್ಲಿ ಟಿಕೆಟ್ ಕೊಡುವಾಗ ನಾವು ಕಳಂಕಿತರಾಗಿ ಕಾಣಲಿಲ್ಲ. ಸರ್ಕಾರ ರಚನೆಯಲ್ಲಿ ಪಾತ್ರ ವಹಿಸುವಾಗ ಕಳಂಕಿತರಾಗಿ ಕಂಡುಬರಲಿಲ್ಲ. ಆದರೆ, ಸಚಿವರಾಗಬೇಕಾದರೆ ಕಳಂಕಿತರಾಗಿದ್ದೇವೆ ಎಂದರೆ ಹೇಗೆ?" ಈ ಪ್ರಶ್ನೆಗೆ ಪಕ್ಷದ ನಾಯಕರು ಉತ್ತರ ನೀಡಬೇಕು ಎಂದು ಹೇಳಿದರು.
ಪ್ರತಿಪಕ್ಷಗಳಾದ ಬಿಜೆಪಿ ಅಥವಾ ಜೆಡಿಎಸ್‌ನವರು ನಮ್ಮನ್ನು ಕಳಂಕಿತರು ಎನ್ನಲಿಲ್ಲ. ನಮ್ಮ ಪಕ್ಷದವರೇ ನಮ್ಮ ವಿರುದ್ಧ ಈ ರೀತಿಯಲ್ಲಿ ಅಪಪ್ರಚಾರ ಮಾಡಿದರು. ಒಬ್ಬರಿಗೆ ಸಚಿವ ಸ್ಥಾನ ತಪ್ಪಿಸಿದರೆ, ನಮಗೆ ಅವಕಾಶ ಸಿಗಬಹುದು ಎಂದು ಪಕ್ಷದಲ್ಲಿ ಆಲೋಚನೆ ನಡೆಸುತ್ತಿದ್ದಾರೆ. ಇಂತಹ ಆಲೋಚನೆ ಇದ್ದರೆ, ಪಕ್ಷದಲ್ಲಿ ಒಗ್ಗಟ್ಟು ಇರುತ್ತದೆಯೇ ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಕಳಂಕಿತರು ಎಂಬ ಆರೋಪ ನಮ್ಮ ಮೇಲೆ ಬಂದಾಗ ಪರಿಶೀಲನೆ ನಡೆಸಿ, ಪಕ್ಷದಿಂದಲೇ ಸ್ಪಷ್ಟನೆ ನೀಡಬೇಕಾಗಿತ್ತು. ಆದರೆ, ಪಕ್ಷ ಅಂತಹ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಶನಿವಾರದ ಪಕ್ಷದ ಕಾರ್ಯಕಾರಣಿ ಸಭೆಯಲ್ಲಿ ಈ ಕುರಿತು ವಿಚಾರ ಮಂಡಿಸಿದೆ ಎಂದು ರಮೇಶ್ ಕುಮಾರ್ ತಿಳಿಸಿದರು. ಕಾರ್ಯಕಾರಣಿಯಲ್ಲಿ ಅಸಮಾಧಾನದಿಂದ ಅಥವ ಕೋಪದಿಂದ ವಿಷಯ ಪ್ರಸ್ತಾಪ ಮಾಡಲಿಲ್ಲ.
ಪಕ್ಷದ ಹಿತದೃಷ್ಟಿಯಿಂದ ಪಕ್ಷದ ನಾಯಕರಿಗೆ ಅನಿಸಿಕೆಗಳನ್ನು ಹೇಳಿದ್ದೇನೆ, ಪಕ್ಷ ನನ್ನ ಸಲಹೆಗಳನ್ನು ಪರಿಗಣಿಸುತ್ತದೆ ಎಂಬ ವಿಶ್ವಾಸದಿಂದ, ಪಕ್ಷದಲ್ಲಿ ಒಗ್ಗಟ್ಟು ಕಾಪಾಡುವ ಉದ್ದೇಶದಿಂದ ವಿಷಯವನ್ನು ಸಭೆಯ ಮುಂದಿಟ್ಟಿದ್ದೇನೆ ಎಂದರು. ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮುಖಂಡರ ಅಭಿಪ್ರಾಯ ಸಂಗ್ರಹಿಸಿ, ಅರ್ಜಿ ಸ್ವೀಕರಿಸಿ, ವೀಕ್ಷಕರ ಸಭೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ನನಗೆ ನಂಬಿಕೆ ಇಲ್ಲ.
ದೆಹಲಿ ಮಟ್ಟದಲ್ಲಿ ಪ್ರಭಾವ ಇರುವವರು ಟಿಕೆಟ್ ಪಡೆದು ಬರುತ್ತಾರೆ. ಆದಾಯ ತೆರಿಗೆ ಕಟ್ಟಿದ ರಸೀದಿ ನೋಡಿ ಲೋಕಸಭೆ ಟಿಕೆಟ್ ನೀಡಬಾರದು ಎಂದ ರಮೇಶ್ ಕುಮಾರ್, ಅಭ್ಯರ್ಥಿಯ ಯೋಗ್ಯತೆ ಮತ್ತು ಅರ್ಹತೆ ನೋಡಿ ಟಿಕೆಟ್ ನೀಡಿ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದೇನೆ ಎಂದರು.
ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಅನಿಲ್ ಲಾಡ್ ಸಹ ಕೆಲವು ದಿನಗಳ ಹಿಂದೆ ನಾನು ಕಳಂಕಿತನಲ್ಲ, ನನಗೆ ಸಚಿವ ಸ್ಥಾನ ನೀಡಿ ಎಂದು ಕಾಂಗ್ರೆಸ್ ನಾಯಕರ ವಿರುದ್ಧವೇ ಗುಡುಗಿದ್ದರು. ಸದ್ಯ ಹಿರಿಯ ಶಾಸಕ ರಮೇಶ್ ಕುಮಾರ್ ಸರದಿ. ಸಚಿವ ಸ್ತಾನದ ಆಕಾಂಕ್ಷಿಗಳು ಸಿಎಂ ಸಿದ್ದರಾಮಯ್ಯ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಲು ಒತ್ತಡ ಹೇರುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆಯೇ? (ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಅನಿಲ್ ಲಾಡ್)












Click it and Unblock the Notifications