ಬೆಂಗಳೂರು: ಇಂದಿನಿಂದ ಹೊಸೂರು, ದೇವನಹಳ್ಳಿಗೆ ಮತ್ತೆ ಮೆಮು ರೈಲು ಸೇವೆ
ಬೆಂಗಳೂರು, ಸೆ.22: ಯಶವಂತಪುರ - ಹೊಸೂರು ಡೆಮು ರೈಲುಗಳನ್ನು ರದ್ದುಗೊಳಿಸಿ ಟೀಕೆಗೆ ಒಳಗಾಗಿರುವ ನೈರುತ್ಯ ರೈಲ್ವೆ (ಎಸ್‌ಡಬ್ಲ್ಯುಆರ್) ಪ್ರಯಾಣಿಕರಿಗೆ ಕೊಂಚ ನೆಮ್ಮದಿ ನೀಡುವ ಕಾರಣದಿಂದ ಗುರುವಾರದಿಂದ ಮೆಮು ರೈಲು ಸೇವೆಗಳನ್ನು ನಡೆಸುವುದಾಗಿ ಮಾಹಿತಿ ನೀಡಿದೆ.
ಯಶವಂತಪುರದಿಂದ ಹೊಸೂರು- ದೇವನಹಳ್ಳಿಗೆ ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲುಗಳು ವಾರದ ಆರು ದಿನಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
06591 ಸಂಖ್ಯೆಯ ಯಶವಂತಪುರ - ಹೊಸೂರು ಕಾಯ್ದಿರಿಸದ ಮೆಮು ಎಕ್ಸ್‌ಪ್ರೆಸ್ ವಿಶೇಷ ರೈಲು ಬೆಳಿಗ್ಗೆ 6.10 ಕ್ಕೆ ಹೊರಟು 7.50 ಕ್ಕೆ ಹೊಸೂರು ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದೇ ರೀತಿ 06592 ಸಂಖ್ಯೆಯ ಹೊಸೂರು - ಯಶವಂತಪುರ ರೈಲು ಹೊಸೂರಿನಿಂದ ಬೆಳಗ್ಗೆ 8.15ಕ್ಕೆ ಹೊರಟು 9.50ಕ್ಕೆ ಯಶವಂತಪುರ ತಲುಪಲಿದೆ.

ಈ ಮೆಮು ರೈಲು ಹೆಬ್ಬಾಳ, ಬಾಣಸವಾಡಿ, ಬೆಳ್ಳಂದೂರು, ಕಾರ್ಮೆಲಾರಂ, ಹೀಲಲಿಗೆ ಮತ್ತು ಆನೇಕಲ್ ರೋಡ್ ನಿಲ್ದಾಣಗಳ ಮೂಲಕಸಾಗಲಿದೆ ಎಂದು ತಿಳಿಸಲಾಗಿದೆ. ಕಚೇರಿಗೆ ಹೋಗುವವರಿಗೆ, ವಿಶೇಷವಾಗಿ ಔಟರ್ ರಿಂಗ್ ರೋಡ್, ಸರ್ಜಾಪುರ ರಸ್ತೆ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಈ ಮೆಮು ರೈಲುಗಳು ಸಹಾಯ ಮಾಡುವ ನಿರೀಕ್ಷೆಯಿದೆ.
ಹೊಸುರಿನ ಜೊತೆಗೆ ಪ್ರತ್ಯೇಕವಾಗಿ ನೈರುತ್ಯ ರೈಲ್ವೆಯು ಗುರುವಾರದಿಂದ ಗಾಡಿ ಸಂಖ್ಯೆ 06593 ಮತ್ತು ಗಾಡಿ ಸಂಖ್ಯೆ 06594 ಯಶವಂತಪುರ-ದೇವನಹಳ್ಳಿ-ಯಶವಂತಪುರ ಕಾಯ್ದಿರಿಸದ ಮೆಮು ಎಕ್ಸ್‌ಪ್ರೆಸ್ ಅನ್ನು ಪರಿಚಯಿಸಲು ನಿರ್ಧರಿಸಿದೆ.

06593 ಸಂಖ್ಯೆ ಯಶವಂತಪುರ - ದೇವನಹಳ್ಳಿ ರೈಲು ಬೆಳಿಗ್ಗೆ 10 ಗಂಟೆಗೆ ಯಶವಂತಪುರದಿಂದ ಹೊರಟು 10.44 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 10.55 ಕ್ಕೆ ದೇವನಹಳ್ಳಿ ತಲುಪುತ್ತದೆ.
ಹಿಂದಿರುಗುವ ಮಾರ್ಗದಲ್ಲಿ, 06594 ಸಂಖ್ಯೆಯ ದೇವನಹಳ್ಳಿ - ಯಶವಂತಪುರ ರೈಲು ದೇವನಹಳ್ಳಿಯಿಂದ ಮಧ್ಯಾಹ್ನ 12.30 ಕ್ಕೆ ಹೊರಟು 12.36 ಕ್ಕೆ ಕೆಐಎ ನಿಲುಗಡೆ ನಿಲ್ದಾಣ ಮತ್ತು ಮಧ್ಯಾಹ್ನ 2.15 ಕ್ಕೆ ಯಶವಂತಪುರವನ್ನು ತಲುಪುತ್ತದೆ.
ಯಶವಂತಪುರ, ದೇವನಹಳ್ಳಿ ಮೆಮು ರೈಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಹೊಂದಿದ್ದು, ವಿಮಾನ ನಿಲ್ದಾಣ ಮತ್ತು ಯಶವಂತಪುರ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಇದು ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications