Bengaluru sub urban rail: 'ಕನಕ' ಕಾರಿಡಾರ್ ಅಪ್ಡೇಟ್ ಮಾಹಿತಿ
ಬೆಂಗಳೂರು, ಮಾರ್ಚ್ 20: ಬೆಂಗಳೂರು ಉಪನಗರ ರೈಲು ಯೋಜನೆಯು ಒಟ್ಟು ನಾಲ್ಕು ಕಾರಿಡಾರ್‌ಗಳಲ್ಲಿ ನಿರ್ಮಾಣಗೊಳ್ಳಲಿದೆ. 148 ಕಿ.ಮೀ. ರೈಲು ಜಾಲ ಇದಾಗಿದ್ದು. ಈ ಯೋಜನೆಗೆ ನೈಋತ್ಯ ರೈಲ್ವೆ ವಲಯವು (SWR) ಭೂಮಿ ಹಸ್ತಾಂತರಿಸಲು ಒಪ್ಪಿಕೊಂಡಿದೆ. ಈ ಮೂಲಕ ಬೆಂಗಳೂರಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ.
ಬೆಂಗಳೂರು ಉಪನಗರ ರೈಲು ಯೋಜನೆ (BSRP)ಗೆ 115 ಎಕರೆ ಭೂಮಿಯನ್ನು ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಕಂಪನಿ (K-RIDE) ಲಿಮಿಟೆಡ್‌ಗೆ ವರ್ಗಾಯಿಸಲು ಒಪ್ಪಿಕೊಂಡಿದೆ. ಈ ಕುರಿತು ಟ್ವೀಟ್ ಮೂಲಕ ಬಿಜೆಪಿ ಸಂಸದ TOI ವರದಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ಈ ಯೋಜನೆಯ 4 ಕಾರಿಡಾರ್ ಪೈಕಿ 'ಕನಕ' ಕಾಡಿಡಾರ್ ದಕ್ಷಿಣದ ಹೀಲಲಿಗೆಯಿಂದ- ಉತ್ತರದ ರಾಜಾನುಕುಂಟೆಗೆ 47-ಕಿಮೀ ರೈಲು ಜಾಲ ಸಂಪರ್ಕ ಸಾಧಿಸಲು ಈ ಭೂಮಿ ಸಹಾಯವಾಗಲಿದೆ. ಈ 115 ಎಕರೆ ಭೂಮಿ ಈ ಕಾರಿಡಾರ್‌ಗೆ ಬಳಕೆ ಆಗಲಿದೆ.
ಒಮ್ಮತಕ್ಕೆ ಬಂದ ಕೆ-ರೈಡ್ & ನೈಋತ್ಯ ರೈಲ್ವೆ
ಭೂಮಿ ಹಸ್ತಾಂತರ ಕುರಿತು ನೈಋತ್ಯ ರೈಲ್ವೆ ಮತ್ತು ಕೆ-ರೈಡ್ ಮಧ್ಯೆ ಹಗ್ಗಜಗ್ಗಾಟ ಶುರುವಾಗಿತ್ತು. ಸಾಕಷ್ಟು ವಿಳಂಬದ ಬಳಿಕ ಯೋಜನೆಗೆ ಅಗತ್ಯವಿರುವ ರೈಲು ಭೂಮಿಯ ವಿಸ್ತೀರ್ಣ ಕುರಿತು ಎರಡೂ ಸಂಸ್ಥೆಗಳು 'ಒಮ್ಮತ'ಕ್ಕೆ ಬಂದಿವೆ. ಇದೇ ವಾರದಲ್ಲಿ ಭೂಮಿ ನೀಡುವ ಕುರಿತು ಒಪ್ಪಂದ ಏರ್ಪಡಬಹುದು. K-RIDE ನಿರ್ಮಿಸುತ್ತಿರುವ ಈ ಕಾರಿಡಾರ್‌ನಲ್ಲಿ 9 ಕಿಮೀ ಎಲಿವೇಟೆಡ್ ಲೈನ್ ಮತ್ತು 38 ಕಿ.ಮೀ. ಅಟ್-ಗ್ರೇಡ್ ಲೈನ್ ಇದೆ.
ಪ್ರಸ್ತುತದಲ್ಲಿ ಚಿಕ್ಕಬಾಣಾವರದಿಂದ ಬೈಯಪ್ಪನಹಳ್ಳಿವರೆಗಿನ ನಾಲ್ಕು ಕಾರಿಡಾರ್‌ಗಳಲ್ಲಿ ಒಂದಾದ 'ಮಲ್ಲಿಗೆ' ಕಾರಿಡಾರ್ ನಿರ್ಮಾಣದ ಕೆಲಸ ಮಾತ್ರ ನಡೆಯುತ್ತಿದೆ. ಉಪನಗರ ಯೋಜನೆಗೆ ನಾಲ್ಕನೇ ಕಾರಿಡಾರ್‌ಗೆ 1,040 ಕೋಟಿ ರೂ. ಟೆಂಡರ್ ಆಹ್ವಾನಿಸಲಾಗಿದೆ.
ವಿಳಂಬ ಇಲ್ಲದೇ 'ಕನಕ' ಕಾರಿಡಾರ್ ನಿರ್ಮಾಣ
ಬಿಎಸ್‌ಆರ್‌ಪಿ ಕಾರಿಡಾರ್-4 ಕ್ಕೆ 194 ಎಕರೆ ಭೂಮಿ ಬೇಕಾಗಿದೆ. ಸದ್ಯ ನೈಋತ್ಯ ರೈಲ್ವೆಯು 115 ಎಕರೆಗೆ ಅಗತ್ಯತೆ ಪರಿಷ್ಕರಿಸಿದ್ದು, ಈಗ ನೀಡಲು ಒಪ್ಪಿಗೆ ನೀಡಿದೆ. ಒಪ್ಪಂದ ಅಂತಿಮಗೊಂಡ ನಂತರ ವರ್ಗಾವಣೆ ಮುಂದುವರಿಯುಯಲಿದೆ. ಮುಂದಿನ ದಿನಗಳಲ್ಲಿ ಈ ಕನಕ ಕಾರಿಡಾರ್ ನಿರ್ಮಾಣ ವಿಳಂಬ ಆಗುವುದಿಲ್ಲ ಎಂದು ಕೆರೈಡ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೆ-ರೈಡ್ ಯೋಜನೆಗೆ ಅಗತ್ಯವಿರುವ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿದೆ. 63,193 ಚದರ ಮೀಟರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಾಲ್ಕು ಅಧಿಸೂಚನೆಗಳನ್ನು ಹೊರಡಿಸಿದೆ. 17,987 ಚ.ಮೀ.ಗೆ ಅಂತಿಮ ಅಧಿಸೂಚನೆ ಪ್ರಕಟವಾಗಿದೆ.
ಭೂಮಿ ಸಿಗುತ್ತಿದ್ದಂತೆ ಕೆಲಸ ಆರಂಭ
ಕಾರಿಡಾರ್ 4 ಅನ್ನು ಆರಂಭಿಸುವ ಉದ್ದೇಶದಿಂದ ಆರಂಭಿಕ ಹಂತದ ಪ್ರಾಥಮಿಕ ಕೆಲಸಗಳು ನಡೆಯುತ್ತಿವೆ. ನೈಋತ್ಯ ರೈಲ್ವೆ ಭೂಮಿ ಹಸ್ತಾಂತರಿಸಿದ ತಕ್ಷಣ ಸಿವಿಲ್ ಕೆಲಸ ಆರಂಭವಾಗಲಿದೆ. ಭೂಮಿ ವರ್ಗಾವಣೆಗೊಂಡ ರೈಲು ಭೂಮಿಯನ್ನು ಹಳಿಗಳನ್ನು ಹಾಕಲು ಮತ್ತು ಭಾಗಶಃ ನಿಲ್ದಾಣದ ನಿರ್ಮಾಣಕ್ಕೆ ಬಳಸಲಾಗುತ್ತದೆ. ಜೊತೆಗೆ ಭೂ ಸ್ವಾಧೀನ ಪ್ರಕ್ರಿಯೆಯೂ ಮುಂದುವರಿಯಲಿದೆ ಎಂದು ಕೆರೈಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?
ನೈಋತ್ಯ ರೈಲು 157 ಎಕರೆ ಭೂಮಿ ಹಂಚಿದ್ದ ಪ್ರದೇಶದಲ್ಲಿ ಉಪನಗರ ರೈಲು 'ಬೈಯಪ್ಪನಹಳ್ಳಿಯಿಂದ ಚಿಕ್ಕಬಾಣಾವರ'ವರೆಗಿನ ಕಾರಿಡಾರ್ ನಿರ್ಮಿಸಲಾಗುತ್ತಿದೆ.
ಬೆಂಗಳೂರಿನ ಹೀಲಲಿಗೆ-ರಾಜನಕುಂಟೆಗೆ ಸಂಪರ್ಕಿಸುವ ಉಪನಗರ ರೈಲು ಯೋಜನೆ ಕಾರಿಡಾರ್-4ರ ಕನಕ ಮಾರ್ಗ ನಿರ್ಮಾಣಕ್ಕೆ 115 ಎಕರೆ ರೈಲ್ವೆ ಭೂಮಿಯನ್ನು ವರ್ಗಾಯಿಸಲು SWR ಒಪ್ಪಿಕೊಂಡಿದೆ. ಬಿಎಸ್‌ಆರ್‌ಪಿ ರೈಲು ಯೋಜನೆಯಲ್ಲಿಯೇ ಈ ಕನಕ ಮಾರ್ಗ ಅತಿ ಉದ್ದದ ವಿಸ್ತರಣೆ ಆಗಿದೆ. ಒಟ್ಟು 47 ಕಿ.ಮೀ ಮಾರ್ಗ ಇದಾಗಿದೆ ಎಂದಿರುವ ಸಂಸದ ತೇಜಸ್ವಿ ಸೂರ್ಯ ಅವರು ಪ್ರಧಾನಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.












Click it and Unblock the Notifications