Swachh Survekshan 2026: ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ 5 ಸ್ಟಾರ್ ಗುರಿ: ಜಿಬಿಎ
ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ‍್ಯಾಂಕಿಂಗ್ ಗಳಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸರ್ಕಸ್ ಮಾಡುತ್ತಿದೆ. ಬೆಂಗಳೂರಿನಲ್ಲಿ ಬ್ಲಾಕ್ ಸ್ಪಾಟ್ ಮುಕ್ತ ಗುರಿಯೊಂದಿಗೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ರ‍್ಯಾಂಕಿಗ್ ಪಡೆಯಲು ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ.
ಬೆಂಗಳೂರು ಪೂರ್ವ ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಬ್ಲಾಕ್ ಸ್ಪಾಟ್ (ಎಲ್ಲೆಂದರಲ್ಲಿ ಕಸ ಹಾಕುವುದು) ನಿವಾರಣೆ, ಕಸ ಸಂಗ್ರಹಣೆ-ವರ್ಗಾವಣೆ ವ್ಯವಸ್ಥೆ, ಸ್ವಚ್ಛತಾ ಸಿಬ್ಬಂದಿಗಳ ಕಲ್ಯಾಣ ಮತ್ತು ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ಸ್ಥಾನ ಗಳಿಸುವ ಕುರಿತು ವಿಸ್ತೃತವಾಗಿ ಚರ್ಚೆ ಮಾಡಲಾಗಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ 5 ಸ್ಟಾರ್ ಗುರಿ ಹಾಕಿಕೊಳ್ಳಲಾಗಿದೆ. ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸ್ವಚ್ಛ ಸರ್ವೇಕ್ಷಣದಲ್ಲಿ ಉತ್ತಮ ರ್ಯಾಂಕ್ ಪಡೆಯುವಂತೆ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆಗೆ 5 ಸ್ಟಾರ್ ರೇಟಿಂಗ್ ಸಾಧಿಸುವ ಗುರಿಯೊಂದಿಗೆ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳು ಶೇ.100 ರಷ್ಟು ಶ್ರಮವಹಿಸಿ ಕಾರ್ಯನಿರ್ವಹಿಸಲು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಮುಂದಿನ 15 ದಿನಗಳೊಳಗಾಗಿ ಮಹದೇವಪುರ ವಲಯದಲ್ಲಿ ಕನಿಷ್ಠ 10 ಕಡೆಗಳು ಮತ್ತು ಕೆ.ಆರ್.ಪುರ ವಲಯದಲ್ಲಿ ಕನಿಷ್ಠ 20 ಕಡೆಗಳಲ್ಲಿ ಗುರುತಿಸಲಾದ ಬ್ಲಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ನಿವಾರಣೆ ಮಾಡಲು ಸೂಚಿಸಲಾಯಿತು. ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ರಂಗೋಲಿ ಚಿತ್ರಣ, ಗ್ರೀನ್ ನೆಟ್ ಬಳಸಿ ಸೌಂದರೀಕರಣ ಮಾಡುವಂತೆ ಹಾಗೂ ಸಾಹಸ್ ಎನ್. ಜಿ.ಓ ಸಹಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಪೂರ್ವ ನಗರ ಪಾಲಿಕೆ ಪ್ರಮುಖ ರಸ್ತೆಗಳಾದ ಹೊರ ವರ್ತುಲ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಗಳಲ್ಲಿಯೇ ಹೆಚ್ಚು ಸಂಖ್ಯೆಯ ಬ್ಲಾಕ್‌ಸ್ಪಾಟ್‌ಗಳು ಕಂಡುಬರುತ್ತಿದ್ದು, ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖ ರಸ್ತೆಗಳಲ್ಲಿನ ಬ್ಲಾಕ್ ಸ್ಪಾಟ್ ನಿವಾರಣೆಗೆ ತುರ್ತು ಕ್ರಮವಹಿಸುವಂತೆ ಸೂಚಿಸಿದ್ದು, ಕಡಿಮೆ ಕಾರ್ಯಕ್ಷಮತೆಯುಳ್ಳ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಪ್ರತಿ ವಾರ್ಡ್‌ಗೆ ಅನುಗುಣವಾಗಿ ಕಸ ಸಂಗ್ರಹ, ಕಸದ ವಾಹನಗಳ ಅವಶ್ಯಕತೆ ಹಾಗೂ ಸಿಬ್ಬಂದಿ ನಿಯೋಜನೆ ಕುರಿತು ಮೈಕ್ರೋ ಪ್ಲಾನ್ ಸಿದ್ಧಪಡಿಸಲು ಪಾಲಿಕೆ ಮುಂದಾಗಿದೆ. ಪೂರ್ವ ನಗರ ಪಾಲಿಕೆಯಲ್ಲಿ ಲಭ್ಯವಿರುವ 33 ಮಾರ್ಷಲ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಾಲಿಕೆ ವ್ಯಾಪ್ತಿಯನ್ನು ಬ್ಲಾಕ್ ಸ್ಪಾಟ್ ಮುಕ್ತಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಹೊರ ವರ್ತುಲ ರಸ್ತೆ, ಹಳೆ ಮದ್ರಾಸ್ ರಸ್ತೆ, ಐಟಿಪಿಎಲ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿನ ಬ್ಲಾಕ್‌ಸ್ಪಾಟ್ ಮೇಲೆ ನಿಗಾ ಇಡಲು ಪ್ರತ್ಯೇಕ ಮಾರ್ಷಲ್‌ಗಳನ್ನು ನಿಯೋಜಿಸಿಕೊಳ್ಳಲು ತಿಳಿಸಲಾಗಿದೆ.
ನಗರ ಪಾಲಿಕೆ ವ್ಯಾಪ್ತಿಯ ಕೆ.ಆರ್. ಪುರ ವಲಯದಲ್ಲಿ ಕನಿಷ್ಠ 3 ಮತ್ತು ಮಹದೇವಪುರ ವಲಯದಲ್ಲಿ ಕನಿಷ್ಠ 2 ಕಡೆಗಳಲ್ಲಿ ಕಸ ವರ್ಗಾವಣೆ ಕೇಂದ್ರಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಲು ನಿರ್ಧರಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿ ಲಭ್ಯವಿರುವ ಐ.ಇ.ಸಿ ಅನುದಾನವನ್ನು ಬಳಸಿ ಸ್ವಚ್ಛತೆ, ಕಸ ವಿಂಗಡಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಸಿ ಕಸದ ಶೇ.100 ರಷ್ಟು ವಿಂಗಡಣೆ ಮತ್ತು ಸಂಸ್ಕರಣೆ ಖಚಿತಪಡಿಸಿಕೊಳ್ಳಬೇಕು. ವಸತಿ ಸಮುಚ್ಛಯಗಳು, ವಾಣಿಜ್ಯ ಮಳಿಗೆಗಳು ಹಾಗೂ ಬೃಹತ್ ಕಟ್ಟಡಗಳಲ್ಲಿ ಕಾಂಪೋಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಲು ತಿಳಿಸಲಾಗಿದೆ.
ವಿವಿಧ ಉಲ್ಲಂಘನೆ ಪ್ರಕರಣಗಳಲ್ಲಿ ದಂಡ ಸಂಗ್ರಹ ಪ್ರಮಾಣವನ್ನು ಪರಿಶೀಲಿಸಿ, ವಿವಿಧ ಪ್ರಕರಣಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ದಂಡ ಜಾರಿಗೊಳಿಸಲು ಮಾರ್ಷಲ್‌ಗಳಿಗೆ ತಿಳಿಸಲಾಗಿದೆ. ಘನ ತ್ಯಾಜ್ಯ ನಿರ್ವಹಣೆಗೆ ಸಿ.ಎಸ್.ಆರ್ ನಿಧಿ ಪಡೆಯಲು ಕಂಪನಿಗಳನ್ನು ಸಂಪರ್ಕಿಸಿ, ಆ ನಿಧಿಯನ್ನು ಸ್ವಚ್ಛತಾ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಹೇಳಲಾಗಿದೆ.












Click it and Unblock the Notifications