Prajwal Revanna: ಆರೋಪಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ, ವಿಚಾರಣೆ ಇಂದು
ಬೆಂಗಳೂರು, ಮೇ. 31: ತಮ್ಮ ಪಕ್ಷದಿಂದ ಅಮಾನತುಗೊಂಡಿರುವ ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ಮೇ 31 ರಂದು ಮಧ್ಯರಾತ್ರಿ 12.30 ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರು ಬಂದ ಕೆಲವೇ ಕ್ಷಣಗಳಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಸ್‌ಐಟಿಗೆ ಒಪ್ಪಿಸಿ, ನಂತರ ಅವರನ್ನು ಬೆಂಗಳೂರಿನ ಸಿಐಡಿ ಕಚೇರಿಗೆ ಕರೆದೊಯ್ಯಲಾಗಿದೆ. ಬಂಧನಕ್ಕೊಳಗಾದ ಕೆಲವೇ ಗಂಟೆಗಳ ನಂತರ, ಪ್ರಜ್ವಲ್ ರೇವಣ್ಣ ಅವರನ್ನು ಶೀಘ್ರದಲ್ಲೇ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ನಿರೀಕ್ಷೆಯಿದೆ, ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.

ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ, ವಿಚಾರಣೆ
ಒಂದು ತಿಂಗಳಿಗೂ ಹೆಚ್ಚು ದಿನ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್ ರೇವಣ್ಣ ಮೇ 31 ರಂದು ಮಧ್ಯರಾತ್ರಿ ಬಂಧನಕ್ಕೊಳಗಾಗಿದ್ದಾರೆ. ಕೆಲವೇ ಗಂಟೆಗಳ ನಂತರ, ಅವರನ್ನು ಇಂದೇ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವ ನಿರೀಕ್ಷೆಯಿದೆ. ನಂತರ ಅವರನ್ನು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಿದ 24 ಗಂಟೆಗಳಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು.
ಇನ್ನು, ಆರೋಪಿ ಪ್ರಜ್ವಲ್ ರೇವಣ್ಣರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಬೆಳಗ್ಗೆ ವೈದ್ಯಕೀಯ ತಪಾಸಣೆ ಮಾಡಿಸಲಾಗುತ್ತದೆ. ವೈದ್ಯಕೀಯ ಪರೀಕ್ಷೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ನ್ಯಾಯಾಲಯದಲ್ಲಿ ಪ್ರಕರಣದ ತನಿಖೆಗೆ ಪ್ರಜ್ವಲ್ರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಎಸ್‌ಐಟಿ ಮನವಿ ಮಾಡಲಿದೆ.
ಈಗಾಗಲೇ ಬಂಧಿತ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಮೊಬೈಲ್ ಸೇರಿ ಅವರ ಬಳಿಯಿದ್ದ ವಸ್ತುಗಳನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಪ್ರಜ್ವಲ್ ರೇವಣ್ಣ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದೆ. ಒಂದು ತಿಂಗಳಿನಿಂದ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಜ್ವಲ್ ಅವರನ್ನು ವಿಶೇಷ ತನಿಖಾ ತಂಡ ತೀವ್ರ ವಿಚಾರಣೆಗೆ ಒಳಪಡಿಸಲಿದೆ.

ಪ್ರಜ್ವಲ್ ಬಂಧನ ನಡೆದಿದ್ದು ಹೇಗೆ?
ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ದೇಶವನ್ನು ಬಿಟ್ಟು ಪರಾರಿಯಾಗಿದ್ದ ಸುಮಾರು ಒಂದು ತಿಂಗಳ ನಂತರ ಜರ್ಮನಿಯಿಂದ ಬೆಂಗಳೂರಿಗೆ ಬಂದ ಪ್ರಜ್ವಲ್ ರೇವಣ್ಣರನ್ನು ತಕ್ಷಣ ಬಂಧಿಸಲಾಯಿತು. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಹಾಗೆ ಎಸ್‌ಐಟಿ ತಂಡವು ಅವರ ಎರಡು ಚೆಕ್ ಇನ್ ಬ್ಯಾಗೇಜ್‌ಗಳನ್ನು ಜಪ್ತಿ ಮಾಡಿದೆ.
ಬೆಂಗಳೂರಿನ ಸಿಐಡಿ ಕಚೇರಿಯ ಹೊರಗೆ ಭದ್ರತೆ ಹೆಚ್ಚಿಸಲಾಗಿದ್ದು, ರೇವಣ್ಣ ಆಗಮಿಸುವ ಮುನ್ನ ಕಚೇರಿಯ ಹೊರಗೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಪ್ರಜ್ವಲ್ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ದೂರಿನ ಮೇರೆಗೆ ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದ ಮೇಲೆ ಎಸ್‌ಐಟಿ ತನಿಖೆ ಎದುರಿಸುತ್ತಿದೆ.
ಇಂಟರ್‌ನೆಟ್‌ನಲ್ಲಿ ವೈರಲ್ ಆದ ಅಶ್ಲೀಲ ವೀಡಿಯೊಗಳ ಸರಣಿಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮೇಲೆ ಇತರ ಎರಡು ಲೈಂಗಿಕ ದೌರ್ಜನ್ಯದ ದೂರುಗಳು ದಾಖಲಾಗಿವೆ. ಇನ್ನು, ಕೆಲವೇ ದಿನಗಳ ಹಿಂದೆ ಪ್ರಜ್ವಲ್ ರೇವಣ್ಣ ಅವರು ಸಾರ್ವಜನಿಕರ ಬಳಿ ಕ್ಷಮೆಯಾಚಿಸುವ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮೇ 31 ರಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು. ಅಲ್ಲದೆ ತಮ್ಮ ವಿರುದ್ಧ ದಾಖಲಾಗಿರುವ ಆರೋಪಗಳು ಮತ್ತು ಪ್ರಕರಣಗಳು ಸುಳ್ಳು ಎಂದಿದ್ದರು.












Click it and Unblock the Notifications