ಗವಿಗಂಗಾಧರೇಶ್ವರನಿಗೆ ಸುದೀರ್ಘ ಸೂರ್ಯ ರಶ್ಮಿ ಸಿಂಚನ: ಶುಭ ಅಶುಭಗಳ ಭವಿಷ್ಯ
ಬೆಂಗಳೂರು, ಜ 15: ದೇಶದ ಪ್ರಸಿದ್ದ ಗುಹಾಂತರ ದೇವಾಲಯಗಳಲ್ಲೊಂದಾದ ದಕ್ಷಿಣಾಭಿಮುಖವಾಗಿರುವ ನಗರದ ಗವಿಗಂಗಾಧರೇಶ್ವರನ ವಿಗ್ರಹಕ್ಕೆ ಸೂರ್ಯ ರಶ್ಮಿ ಅಭಿಷೇಕವಾಗಿದೆ. ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಿಸಲಿವ ವೇಳೆ ಈ ಅದ್ಬುತ ವಿಸ್ಮಯವನ್ನು ಭಕ್ತರು ಕಣ್ತುಂಬಿ ಕೊಂಡಿದ್ದಾರೆ.
ಏಳನೇ ಶತಮಾನದ ದಕ್ಷಿಣದ ಕಾಶಿ ಎಂದೇ ಕರೆಯಲ್ಪಡುವ ಗವಿಗಂಗಾಧರೇಶ್ವರನ ಗರ್ಭಗುಡಿಯನ್ನು ಸೂರ್ಯ ರಶ್ಮಿ ಭಾನುವಾರ (ಜ 15) ಸಂಜೆ 4.58ಕ್ಕೆ ಗರ್ಭಗುಡಿಯ ನಂದಿಯ ಬೆನ್ನಿನ ಭಾಗವನ್ನು ಸ್ಪರ್ಶಿಸಿದ್ದು, ಬಳಿಕ ನಂದಿಯ ಕೊಂಬುಗಳ ಮಧ್ಯೆ ಹಾದು ಲಿಂಗವನ್ನು ತಲುಪಿದೆ. ಸುದೀರ್ಘ ಎನ್ನಬಹುದಾದ 3.12 ನಿಮಿಷ ಸೂರ್ಯನ ರಶ್ಮಿ ಲಿಂಗದ ಮೇಲಿತ್ತು.
ಸಾಮಾನ್ಯವಾಗಿ ಮೂವತ್ತರಿಂದ ನಲವತ್ತು ಸೆಕೆಂಡ್ ಮಾತ್ರ ಸೂರ್ಯನ ರಶ್ಮಿಯು ಲಿಂಗದ ಮೇಲೆ ಬಿದ್ದು ಹಾದು ಹೋಗುತ್ತಿತ್ತು. ಸೂರ್ಯನ ರಶ್ಮಿ ಲಿಂಗದ ಮೇಲೆ ಬೀಳುತ್ತಿದ್ದಂತೆಯೇ ಗಂಗಾಧರೇಶ್ವರನಿಗೆ ರುದ್ರಾಭಿಷೇಕ, ಮಹಾಪೂಜೆ ನಡೆದಿದೆ.
ಎರಡು ವರ್ಷದ ಹಿಂದೆ ಸೂರ್ಯನ ರಶ್ಮಿಯ ಸ್ಪರ್ಶವಾಗಿರಲಿಲ್ಲ. ಹಾಗಾಗಿ, ಇದು ನಡೆಯದೇ ಇದ್ದಿದ್ದರಿಂದ ಗಂಗಾಧರೇಶ್ವರನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಜೊತೆಗೆ, ಇದು ಅಶುಭದ ಫಲ ಎಂದು ಜ್ಯೋತಿಷಿಗಳು ವ್ಯಾಖ್ಯಾನಿಸಿದ್ದರು. ಅದರಂತೆಯೇ, ಕೊರೊನಾದಿಂದಾಗಿ ಸಾರ್ವಜನಿಕರು ಸಾಕಷ್ಟು ಕಷ್ಟವನ್ನು ಅನುಭವಿಸಿದ್ದರು.
ಈ ಬಾರಿ ಸುದೀರ್ಘವಾಗಿ ರಶ್ಮಿ ಸಿಂಚನವಾಗಿರುವುದು ಜಗತ್ತಿಗೆ ಶುಭದ ಮುನ್ಸೂಚನೆ ಎಂದು ಶ್ರೀಕ್ಷೇತ್ರದ ಮುಖ್ಯಸ್ಥ ಡಾ.ಸೋಮಸುಂದರ್ ದೀಕ್ಷಿತ್ ಎಂದು ಅಭಿಪ್ರಾಯ ಪಟ್ಟರು.
"ಕುಂಭದಲ್ಲಿ ಶನಿ ಮತ್ತು ಸೂರ್ಯ ಒಂದಾಗಿರುವುದರಿಂದ ಜನರಿಗೆ ಶಾಸ್ವತ ಸುಖ ಸಿಗುತ್ತದೆ, ತಂದೆ ಮತ್ತು ಮಕ್ಕಳ ಸಂಬಂಧ ಚೆನ್ನಾಗಿರುತ್ತದೆ. ತಂದೆಯಾದವನು ಉದಾರವಾಗಿ ಇರಬೇಕಾಗುತ್ತದೆ"ಎಂದು ದೀಕ್ಷಿತರು ಹೇಳಿದರು.
"ಸೂರ್ಯ ಭಗವಂತ ನಿಂತು ಗವಿಗಂಗಾಧರೇಶ್ವರನಿಗೆ ಅಭಿಷೇಕ, ಪೂಜೆ ಮಾಡಿ ಮುಂದಕ್ಕೆ ಸಾಗಿದ್ದಾನೆ. ಶಿಲಾಭಾಗದಲ್ಲಿ ಪೂರ್ಣವಾಗಿ ರಶ್ಮಿ ಸಿಂಚನವಾಗಿದೆ. ಇದು ಶುಭದ ಮುನ್ಸೂಚನೆ ಮತ್ತು ಅಶುಭ ಎದುರಾಗುವುದಿಲ್ಲ"ಎಂದು ಸೋಮಸುಂದರ್ ದೀಕ್ಷಿತ್ ಭವಿಷ್ಯವನ್ನು ನುಡಿದರು.