Summer in Karnataka: ಅವಧಿಗೂ ಮೊದಲೇ ರಾಜ್ಯಕ್ಕೆ ಬೇಸಿಗೆ ಆಗಮನ, ವಿವರಗಳು
ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಸಾಮಾನ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನ ವಿಷಯಕ್ಕೆ ಬಂದರೆ, ತಾಪಮಾನವು ಸುಮಾರು 31 ರಿಂದ 32 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ.
ಬೆಂಗಳೂರು, ಫೆಬ್ರವರಿ. 22: ಅವಧಿಗಿಂತ ಮೊದಲೇ ಈ ಬಾರಿ ರಾಜ್ಯಕ್ಕೆ ಬೇಸಿಗೆ ಆಗಮಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಮಾರ್ಚ್ 1 ಕ್ಕೆ ಬರುತ್ತಿದ್ದ ಬೇಸಿಗೆ ಫೆಬ್ರವರಿ 24 ರಿಂದ ಪ್ರಾರಂಭವಾಗಲಿದೆ ಎಂದು ಎಚ್ಚರಿಕೆ ಕೊಟ್ಟಿದೆ.
ಮುಂಬರುವ ದಿನಗಳಲ್ಲಿ ತಾಪಮಾನ ಏರಿಕೆಯೊಂದಿಗೆ ಶುಷ್ಕ ಹವಾಮಾನ ಉಂಟಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆಯನ್ನೂ ನೀಡಿದೆ. ಉತ್ತರ ಮತ್ತು ವಾಯುವ್ಯ ಮಾರುತಗಳು ಬೆಚ್ಚಗಾಗಿರುವುದು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

"ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ಸಾಮಾನ್ಯ ಗರಿಷ್ಠ ತಾಪಮಾನ ದಾಖಲಾಗುತ್ತಿದೆ. ಬೆಂಗಳೂರಿನ ವಿಷಯಕ್ಕೆ ಬಂದರೆ, ತಾಪಮಾನವು ಸುಮಾರು 31 ರಿಂದ 32 ಡಿಗ್ರಿ ಸೆಲ್ಸಿಯಸ್‌ನಲ್ಲಿದೆ. ಆರ್ದ್ರತೆಯ ಮಟ್ಟವು ಸುಮಾರು 20 ರಿಂದ 35 ಪ್ರತಿಶತದಷ್ಟು ಇರುವುದರಿಂದ ಸಾರ್ವಜನಿಕರು ಶಾಖವನ್ನು ಅನುಭವಿಸುತ್ತಿದ್ದಾರೆ " ಎಂದು ಹಿರಿಯ ಐಎಂಡಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
ಸಾಮಾನ್ಯವಾಗಿ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ 7 ಮಿಮೀ ಸಾಮಾನ್ಯ ಮಳೆಯಾಗುತ್ತದೆ. ಆದರೆ, ಈ ವರ್ಷ ಮಳೆ ಬಂದಿಲ್ಲ ಎಂದು ಅಧಿಕಾರಿ ಹೇಳಿದ್ದು, ಮುಂದಿನ ಐದು ದಿನಗಳಲ್ಲಿ ರಾಜ್ಯದಲ್ಲಿ ಬೇಸಿಗೆಯ ಬಿಸಿಲಿನ ತಾಪ ಹೆಚ್ಚಲಿದೆ. ಮಳೆಯೂ ಇಲ್ಲ ಮತ್ತು ಮೋಡವೂ ಕಾಣಿಸುತ್ತಿಲ್ಲ ಇದು ಮಳೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಸಾಮಾನ್ಯವಾಗಿ, ಉತ್ತರ ಭಾರತದ ಭಾಗಗಳಲ್ಲಿ ಫೆಬ್ರವರಿ ತಿಂಗಳಲ್ಲಿ ಚಳಿಗಾಲದ ಚಳಿಯನ್ನು ಅನುಭವಿಸುತ್ತಲೇ ಇರುತ್ತವೆ. ಆದರೆ, ಈ ಬಾರಿ ಅಲ್ಲಿಯೂ ತಾಪಮಾನ ಏರಿಕೆಯಾಗಲು ಪ್ರಾರಂಭಿಸಿದೆ. ಉತ್ತರ ಭಾರತದಿಂದ ಬೀಸುವ ಗಾಳಿಯು ಬೆಚ್ಚಗಿರುತ್ತದೆ. ಗಾಳಿಯ ದಿಕ್ಕಿನಲ್ಲಿ ಬದಲಾವಣೆ ಮತ್ತು ಸೈಕ್ಲೋನ್ ಪರಿಣಾಮವೂ ಇದಕ್ಕೆ ಕಾರಣ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು, ಕರ್ನಾಟಕ ಸೇರಿದಂತೆ 15 ರಾಜ್ಯಗಳಲ್ಲಿ ಹವಾಮಾನ ಅಪಾಯ ಎದುರಾಗಲಿದೆ ಎಂದು ವರದಿಯೊಂದು ಎಚ್ಚರಿಕೆ ನೀಡಿದೆ. ಇದು ಹವಾಮಾನ ವೈಪರೀತ್ಯ ಮತ್ತು ಹವಾಮಾನ ಬದಲಾವಣೆಯಿಂದ ಹಾನಿಗೊಳಗಾಗುತ್ತದೆ ಎಂದು ವಿಶ್ಲೇಷಣೆ ಹೇಳಿದೆ. ಮೊದಲ ಹಾನಿ ಮೂಲಸೌಕರ್ಯಕ್ಕೆ ಸಂಭವಿಸಿಲದೆ ಎಂದಿರುವ ವರದಿ, ಚೀನಾ, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತವನ್ನು ಅತ್ಯಂತ ದುರ್ಬಲ ರಾಷ್ಟ್ರಗಳು ಎಂದು ತಿಳಿಸಿದೆ.
2050ರ ಪ್ರಾದೇಶಿಕ ಅಪಾಯದ ಅಂಕಿ ಅಂಶಕ್ಕಾಗಿ ಹೂಡಿಕೆದಾರರ ಬೇಡಿಕೆಗೆ ಪ್ರತಿಕ್ರಿಯೆಯಾಗಿ ಕ್ರಾಸ್ ಡಿಪೆಂಡೆನ್ಸಿ ಇನಿಶಿಯೇಟಿವ್ (XDI) ಪ್ರಪಂಚದಾದ್ಯಂತ 2,600 ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದೆ.











Click it and Unblock the Notifications