ಬೇಸಿಗೆಗೆ ಬತ್ತಿದ ಬೆಂಗಳೂರು ಕೆರೆಗಳು: ಬೋರ್‌ವೆಲ್ ಬರಿದಾಗುವ ಆತಂಕ
ಬೆಂಗಳೂರು, ಏಪ್ರಿಲ್ 21: ಕಳೆದ ವರ್ಷದ ಮುಂಗಾರು ಮಳೆಯ ಅಬ್ಬರದ ನಡುವೆಯೂ ಈ ವರ್ಷದ ಏಪ್ರಿಲ್‌ನಲ್ಲಿಯೇ ಉದ್ಯಾನ ನಗರಿ ಬೆಂಗಳೂರಿನ ನಗರದ 53 ಕೆರೆಗಳು ಬತ್ತಿ ಹೋಗಿದ್ದು, ಆಟದ ಮೈದಾನದಂತೆ ಆಗಿವೆ. ಇನ್ನೂ ಹಲವು ಕರೆಗಳಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಸುತ್ತಮುತ್ತಲಿನ ಜನರ ಆತಂಕಕ್ಕೆ ಕಾರಣವಾಗಿದೆ. ನಗರದಲ್ಲಿ ಸರಿಯಾಗಿ ಮಳೆ ಸುರಿಯಲು ಮೇ ತಿಂಗಳು ಪೂರ್ತಿ ಕಳೆಯಬೇಕಿದ್ದು, ಇದು ಜನರ ಚಿಂತೆಗೆ ಕಾರಣವಾಗಿದೆ.
ನಗರದ ಕೆರೆಗಳಲ್ಲಿ ಶೇ 35ರಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ವರದಿ ಹೇಳಿದೆ. ಒಂದು ವೇಳೆ ಕೆರೆ ಸಂಪೂರ್ಣ ಬತ್ತಿ ಹೋದರೆ ಅಂತರ್ಜಲ ಮಟ್ಟ ಇಳಿಕೆಯಾಗಿ, ಕೆರೆ ಸುತ್ತಲಿನ ಬಡಾವಣೆಗಳಲ್ಲಿನ ಬೋರ್‌ವೆಲ್‌ನಲ್ಲಿಯೂ ನೀರಿನ ಕೊರತೆ ಉಂಟಾಗಲಿದೆ.

ಬೆಂಗಳೂರು ನಗರದ ಹಲವು ಕೆರೆಗಳ ನೀರಿನ ಮಟ್ಟದಲ್ಲಿ ದಿಢೀರ್ ಕುಸಿತ ಕಂಡುಬರುತ್ತಿದೆ. ಪೂರ್ವ ಮುಂಗಾರು ಮಳೆ ನಗರದಲ್ಲಿ ಆಗಾಗ ಸುರಿಯುತ್ತಿದೆ. ಆದರೆ ಬಿಸಿಲು ಅಧಿಕವಾಗಿದ್ದು, ನೀರು ಬೇಗ ಖಾಲಿಯಾಗುತ್ತಿದೆ. 2024ರ ನವೆಂಬರ್ ತನಕ ಬೆಂಗಳೂರು ನಗರದಲ್ಲಿ ಮಳೆಯಾಗುತ್ತಲೇ ಇತ್ತು. ಆದ್ದರಿಂದ ಎಲ್ಲಾ ಕೆರೆಗಳು ಭರ್ತಿಯಾಗಿದ್ದವು.
ಆದರೆ 2025ರ ಮಾರ್ಚ್ ಅಂತ್ಯ, ಏಪ್ರಿಲ್‌ಗೆ ಹಲವು ಕೆರೆಗಳು ಆಟದ ಮೈದಾನವಾಗಿವೆ. ಬಿಬಿಎಂಪಿ ಮಾಹಿತಿಗಳ ಪ್ರಕಾರ ಅದರ ವ್ಯಾಪ್ತಿಯ 202 ಕೆರೆಗಳ ಪೈಕಿ 183 ಸಕ್ರಿಯವಾಗಿವೆ. 53 ಸಂಪೂರ್ಣ ಬತ್ತಿವೆ. 130 ಕೆರೆಗಳಲ್ಲಿ ಶೇ 40ರಷ್ಟು ನೀರಿನ ಸಂಗ್ರಹ ಮಾತ್ರವಿದೆ. ಎಲ್ಲಾ ಕೆರೆಗಳನ್ನು ಸೇರಿಸಿದರೆ ನಗರದಲ್ಲಿ ಶೇ 35ರಷ್ಟು ನೀರಿನ ಸಂಗ್ರಹವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೂರ್ವ ಮುಂಗಾರು ಮಳೆ ಅಂತರ್ಜಲ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಸದ್ಯದ ಮಾಹಿತಿ ಪ್ರಕಾರ ಕೆರೆಗಳು ಬತ್ತಿ ಹೋಗಿರುವುದರಿಂದ 3 ಲಕ್ಷಕ್ಕೂ ಅಧಿಕ ಬೋರ್‌ವೆಲ್‌ಗಳು ಬರಿದಾಗಿವೆ. ಕಳೆದ ವರ್ಷವೂ ಅತಿಯಾದ ತಾಪಮಾನದ ಕಾರಣ ಬಾವಿಗಳು ಬತ್ತಿ ಹೋಗಿದ್ದವು. ಆದರೆ ಮಳೆಗಾಲ ಉತ್ತಮವಾಗಿದ್ದರಿಂದ ಎಲ್ಲವೂ ಭರ್ತಿಯಾಗಿದ್ದವು.
ನಗರದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಮಳೆ ನೀರು ಕೊಯ್ಲು ಮೂಲಕ ಬೋರ್ ವೆಲ್ ಮರು ಪೂರಣಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದು ಪರಿಸರವಾದಿಗಳು ಹೇಳಿದ್ದಾರೆ. ಬಿಬಿಎಂಪಿ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಿದ್ದರೂ ಸಹ ಅದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ. ಆದ್ದರಿಂದ ಕೆರೆಗಳ ನೀರಿನ ಮಟ್ಟ ಕುಸಿಯುತ್ತಿದ್ದಂತೆಯೇ ಅಂತರ್ಜಲ ಮಟ್ಟ ಕಡಿಮೆಯಾಗಿ ಬೋರ್‌ವೆಲ್ ಬತ್ತಿ ಹೋಗುತ್ತದೆ.
ಬಿಬಿಎಂಪಿಯ ಆರ್. ಆರ್. ನಗರ ವಲಯದಲ್ಲಿ 33ರಲ್ಲಿ 12 ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ದಾಸರಹಳ್ಳಿಯಲ್ಲಿ 12ರಲ್ಲಿ 6, ಪೂರ್ವ ವಲಯದಲ್ಲಿ 5 ರಲ್ಲಿ 2, ಪಶ್ಚಿಮ ವಲಯದಲ್ಲಿ 2 ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಮಹದೇವಪುರ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಕೆರೆಗಳು ಖಾಲಿಯಾಗಿವೆ. ಮಾಹಿತಿಯಂತೆ 50ರಲ್ಲಿ 19 ಕೆರೆಗಳು ಸಂಪೂರ್ಣ ಬತ್ತಿವೆ. ಯಲಹಂಕ ವಲಯದಲ್ಲಿ 27ರಲ್ಲಿ 12 ಬತ್ತಿ ಹೋಗಿವೆ. ಬೊಮ್ಮನಹಳ್ಳಿಯಲ್ಲಿ 44ರಲ್ಲಿ 2 ಬತ್ತಿವೆ.
ನಗರದಲ್ಲಿ ಮಳೆ ನೀರು ಕೊಯ್ಲು ಮತ್ತು ಕೆರೆಗಳ ಪುನರ್ ಅಭಿವೃದ್ಧಿಯನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಪ್ರತಿ ವರ್ಷದ ಬೇಸಿಗೆಯಲ್ಲಿಯೂ ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.
ಬೆಂಗಳೂರು ಜಲಮಂಡಳಿ, ಬಿಬಿಎಂಪಿ ಸೇರಿ ಕಬ್ಬನ್ ಪಾರ್ಕ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆ ನೀರು ಕೊಯ್ಲು ಯೋಜನೆಯನ್ನು ಜಾರಿಗೊಳಿಸಿದ್ದು, ಅದು ಯಶಸ್ವಿಯಾಗಿದೆ. ನಗರದ ಬಡಾವಣೆಗಳಲ್ಲಿ ಹಲವು ಮನೆಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಜಾರಿಗೊಳಿಸಲಾಗಿದೆ. ಆದರೆ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ನಗರದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕಿದೆ.
ಕಾವೇರಿ ಯೋಜನೆಯ ಮೂಲಕ ಬೆಂಗಳೂರು ನಗರಕ್ಕೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‌ಎಸ್ ಡ್ಯಾಂ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತದೆ. ಏಪ್ರಿಲ್ 19ರ ಮಾಹಿತಿಯಂತೆ 124 ಅಡಿಯ ಡ್ಯಾಂನಲ್ಲಿ 100.8 ಅಡಿ ನೀರಿನ ಸಂಗ್ರಹವಿದೆ. 22.87 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಆದ್ದರಿಂದ ಈ ಬಾರಿ ಬೇಸಿಗೆಯಲ್ಲಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ.












Click it and Unblock the Notifications