ಕೈ ಮುಖಂಡರ ಬಂಧನದಿಂದ ಬಿಡುಗಡೆ ಆದ ಸುಧಾಕರ್ ಹೇಳಿದ್ದೇನು?
ಬೆಂಗಳೂರು, ಜುಲೈ 10: ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಇಂದು ವಿಧಾನಸೌಧದಲ್ಲಿ ನಡೆದ ಹೈ ಡ್ರಾಮಾದ ಕೇಂದ್ರ ಬಿಂದು ಆಗಿದ್ದರು.
ರಾಜೀನಾಮೆ ನೀಡಲು ಆಗಮಿಸಿದ್ದ ಸುಧಾಕರ್ ಅವರನ್ನು ಕಾಂಗ್ರೆಸ್ ಮುಖಂಡರು, ಶಾಸಕರು ಎಳೆದಾಡಿ, ಅವರನ್ನು ಪ್ರತ್ಯೇಕ ಕೊಠಡಿಗೆ ಕರೆದುಕೊಂಡು ಹೋಗಿದ್ದರು. ಆ ನಂತರ ಅವರನ್ನು ಬಿಡಿಸಿಕೊಳ್ಳಲು ಬಿಜೆಪಿ ಶಾಸಕರು ಬಂದು ಕೊಠಡಿಯ ಮುಂದೆ ಧರಣಿ ಮಾಡಿದರು.
ಈ ನಡುವೆ ಸಿದ್ದರಾಮಯ್ಯ ಅವರು, ಸುಧಾಕರ್ ಅವರನ್ನು ಅದೇ ಕೊಠಡಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು, ಭೇಟಿ ನಂತರ ಭಾರಿ ಪೊಲೀಸ್ ಭದ್ರತೆಯಲ್ಲಿ ಸುಧಾಕರ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ನೀಡಿದರು.

ಇವೆಲ್ಲ ಘಟನೆಗಳ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾಕರ್ ಅವರು, ಸಚಿವ ಪ್ರಿಯಾಂಕ್ ಖರ್ಗೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಚಿವರಾಗಿ ಅವರು ಹಾಗೆ ನಡೆದುಕೊಳ್ಳಬಾರದಿತ್ತು ಎಂದು ಹೇಳಿದರು.
ಸಿದ್ದರಾಮಯ್ಯ ಅವರು ನನ್ನ ಹಿತೈಶಿ ಹಾಗಾಗಿ ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು, ನಾನು ರಾಜೀನಾಮೆ ನೀಡುತ್ತಿರುವ ಬಗ್ಗೆ ಕಾರಣವನ್ನು ಅವರ ಮುಂದೆ ಹೇಳಿದ್ದೇನೆ ಎಂದು ಸುಧಾಕರ್ ಹೇಳಿದರು.
ನಾನು ದೆಹಲಿ, ಮುಂಬೈ ಎಲ್ಲಿಗೂ ಹೋಗುತ್ತಿಲ್ಲ, ಇಲ್ಲಿಯೇ ಇರುತ್ತೇನೆ ಎಂದ ಸುಧಾಕರ್, ವಿಧಾನಸೌಧದಲ್ಲಿ ಆದ ನೂಕಾಟ, ತಳ್ಳಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು.












Click it and Unblock the Notifications