ಭತ್ತಕ್ಕೆ ಬೆಂಬಲ ಬೆಲೆ:ಕುಮಾರಸ್ವಾಮಿ ಮಹತ್ವದ ಘೋಷಣೆ
ಬೆಂಗಳೂರು, ನವೆಂಬರ್ 14: ಭತ್ತದ ಬೆಲೆ ಕುಸಿತದಿಂದ ಕೆಂಗೆಟ್ಟಿರುವ ರೈತರ ಸಂಕಷ್ಟಕ್ಕೆ ಧಾವಿಸಿರುವ ರಾಜ್ಯ ಸರ್ಕಾರ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1600ರೂ ನಂತೆ ಖರೀದಿಸಲು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಗೃಹ ಕಚೇರಿ ಕೃಷ್ಣದಲ್ಲಿ ಈ ಸಂಬಂಧ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಉನ್ನತ ಅಧಿಕಾರಿಗಳ ಸಭೆ ನಡೆಸಿ, ತಕ್ಷಣವೇ ಮಾರುಕಟ್ಟೆ ಮೂಲಕ ಪ್ರತಿ ಕ್ವಿಂಟಾಲ್ ಭತ್ತಕ್ಕೆ 1600 ರೂ ನಂತೆ ಖರೀದಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು.
ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ನಾಡಗೌಡ ವೆಂಕಟರಾವ್ ಅವರು, ಭತ್ತದ ಬೆಳೆಯ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಗಮನ ಸೆಳೆದರು.

ಇದಕ್ಕೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕೂಡಲೇ ಮಾರುಕಟ್ಟೆಯ ಮೂಲಕ ಒಂದು ಕ್ವಿಂಟಾಲ್ ಗೆ 1600 ರೂ ನಂತೆ ಖರೀದಿಸಬೇಕೆಂದು ಸೂಚಿಸಿದರು. ಹಾಗೆಯೇ ನೇಕಾರರ ಸ್ಥಿತಿಯನ್ನು ಅವಲೋಕಿಸಿದರು. ರಾಜ್ಯದಲ್ಲಿ ನೇಕಾರರ ಪರಿಸ್ಥಿತಿ ಬಹುತೇಕ ಸಂದರ್ಭದಲ್ಲಿ ರೈತರಿಗಿಂತ ದುಸ್ತರವಾಗಿದೆ. ಹಲವಾರು ಕುಟುಂಬಗಳ ಸದಸ್ಯರು ಆತ್ಮಹತ್ಯೆಯಂತಹ ಕ್ರಮಕ್ಕೂ ಮುಂದಾಗಿದ್ದಾರೆ.
ನೇಕಾರರ ಬವಣೆಗಳನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. ನೇಕಾರರ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ಯೋಜನೆಗಳಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸಂಬಂಧಿಸಿದ ತಜ್ಞರು ಮತ್ತು ಅಧಿಕಾರಿಗಳೊಂದಿಗೆ ಶೀಘ್ರವೇ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಮತ್ತು ನೇಕಾರರ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಭರವಸೆ ನೀಡಿದರು.












Click it and Unblock the Notifications