ಚುನಾವಣೆ ಹಿನ್ನೆಲೆ ಸ್ವಾಧೀನ ಪಡೆದ ಶಸ್ತ್ರಾಸ್ತ್ರ ವಾಪಸ್‌ಗೆ ಸರ್ಕಾರ ನಿರ್ಧಾರ: ವಿವರ ಇಲ್ಲಿದೆ.
ಬೆಂಗಳೂರು, ಏಪ್ರಿಲ್ 21: ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿರುವ ಭಾಗಗಳ ಪರವಾನಿಗೆ ಹೊಂದಿರುವ ರೈತರಿಂದ ಸ್ವಾಧೀನಕ್ಕೆ ಪಡೆದಿದ್ದ ಶಸ್ತ್ರಾಸ್ತ್ರಗಳನ್ನು ಕೆಲವು ಷರತ್ತುಗಳ ಅನ್ವಯ ಹಿಂದಿರುಗಿಸಿರುವುದಾಗಿ ಸರ್ಕಾರ ಹೈಕೋರ್ಟ್ ತಿಳಿಸಿದೆ. ಹಾಗಾಗಿ ಕಾಡಂಚಿನ ಗ್ರಾಮಗಳ ಜನರು ತಮ್ಮ ಬಂದೂಕು ಅಥವಾ ಕೋವಿ ಇಟ್ಟುಕೊಂಡು ಜೀವ ರಕ್ಷಿಸಿಕೊಳ್ಳಬಹುದು.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರನಾಡು ಗ್ರಾಮದ ಕೃಷಿಕ ಕೆ.ವಿ.ಪ್ರಸಾದ್ ಸೇರಿದಂತೆ ಹಲವು ಮಂದಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠಕ್ಕೆ ಈ ವಿಷಯ ತಿಳಿಸಿದೆ.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಪರವಾನಿಗೆ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಚುನಾವಣಾ ಸಂದರ್ಭದಲ್ಲಿ ಸರ್ಕಾರದ ಸುಪರ್ಧಿಗೆ ಒಪ್ಪಿಸುವಂತೆ ಆದೇಶ ನೀಡಲು ಅಧಿಕಾರವಿದಿಯೇ ಎಂಬುದರ ವಾದ ಆಲಿಸಲು ವಿಚಾರಣೆಯನ್ನು ಮುಂದೂಡಿತು.
ಷರತ್ತುಗಳೇನು?
ಚುನಾವಣಾ ಪ್ರಚಾರ ಸಭೆ, ಮೆರವಣಿಗೆ, ಪಾದಯಾತ್ರೆಗಳಲ್ಲಿ ಶಸ್ತ್ರಾಸ್ತ್ರ ಒಯ್ಯಲು ಅವಕಾಶವಿಲ್ಲ. ಮತದಾನದ ದಿನದಂದು ಶಸ್ತ್ರಾಸ್ತ್ರವನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗುವಂತಿಲ್ಲ. ಶಸ್ತ್ರಾಸ್ತ್ರಕ್ಕೆ ಪರವಾನಿಗೆ ಹೊಂದಿದ್ದರೂಮ ಬಹಿರಂಗ ಪ್ರದರ್ಶನ ಮಾಡುವುದಕ್ಕೆ ಅವಕಾಶವಿಲ್ಲ.
ಸಾರ್ವಜನಿಕರನ್ನು ಪ್ರತ್ಯಕ್ಷ್ಯ ಮತ್ತು ಪರೋಕ್ಷವಾಗಿ ಬೆದರಿಕೆ ಹಾಕುವುದಕ್ಕೆ ಬಳಸಬಾರದು. ಪೊಲೀಸರ ತಪಾಸಣೆ ವೇಳೆ ಹಾಜರು ಪಡಿಸಿ ದಾಖಲೆಗಳನ್ನು ಒದಗಿಸಬೇಕು. ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಯಾವುದೇ ಮನ್ಸೂಚನೆ ನೀಡದೆಯು ಶಸ್ತ್ರಾಸ್ತ್ರವಶಕ್ಕೆ ಪಡೆದು ಕೊಳ್ಳಬಹುದಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಅರ್ಜಿದಾರರ ಕೋರಿಕೆ ಏನು?
ನಾನೊಬ್ಬ ಕೃಷಿಕ. ನಾನು ಜನ ವಿರಳವಾದ ಬೆಳ್ಳಾರೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ಹೀಗಾಗಿ, ನನ್ನ ಜೀವ ರಕ್ಷಣೆ ಮತ್ತು ಕೃಷಿ ಚಟುವಟಿಕೆ ವೇಳೆ ವನ್ಯ ಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ನನಗೆ ಬಂದೂಕಿನ ಅಗತ್ಯವಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನನ್ನ ಬಂದೂಕನ್ನು ತನ್ನ ಸುಪರ್ದಿಗೆ ಪಡೆದಿದೆ. ಆಯುಧ ಸುಪರ್ದಿಗೆ ಪಡೆಯುವ ಆದೇಶದಿಂದ ನನಗೆ ವಿನಾಯಿತಿ ನೀಡುವಂತೆ ಕೋರಲಾದ ಮನವಿಯನ್ನು ತಿರಸ್ಕರಿಸಲಾಗಿದೆ. ಇದು ಸಹಜ ನ್ಯಾಯತತ್ವ ಹಾಗೂ ಸಂವಿಧಾನದ 14, 16 ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸರ್ಕಾರ ಈ ಸಂಬಂಧ ೨೦೨೪ರ ಮಾರ್ಚ್ ೨೬ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.












Click it and Unblock the Notifications