ಎಚ್.ಎಸ್.ದೊರೆಸ್ವಾಮಿ ಧರಣಿಗೆ ಮಣಿದ ಸರ್ಕಾರ

ಮಂಗಳವಾರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಎ.ಟಿ.ರಾಮಸ್ವಾಮಿ ಮತ್ತು ಯಲ್ಲಪ್ಪ ರೆಡ್ಡಿ ಮುಂತಾದವರು, ವಿಧಾನಸೌಧದದಲ್ಲಿರುವ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿಬಿ ಜಯಚಂದ್ರ ಅವರ 327ನೇ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು. ಭೂ ಮಾಫಿಕಾ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. [ವಿಧಾನಸೌದದಲ್ಲಿ ಧರಣಿ ಕೂತ ದೊರೆಸ್ವಾಮಿ]
ಕರ್ನಾಟಕ ಭೂ ಒತ್ತುವರಿ ನಿಷೇಧ ಮಸೂದೆ ಜಾರಿ ಹಾಗೂ ಎ.ಟಿ.ರಾಮಸ್ವಾಮಿ ಮತ್ತು ವಿ.ಬಾಲಸುಬ್ರಮಣಿಯನ್ ನೀಡಿದ ಸರ್ಕಾರಿ ಭೂ ಒತ್ತುವರಿ ವರದಿಯನ್ನು ಸರ್ಕಾರ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವ ಮೂಲಕ ಸರ್ಕಾರಿ ಭೂಮಿ ಒತ್ತುವರಿ ಮಾಡುವವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಧರಣಿ ಸ್ಥಳಕ್ಕೆ ಆಗಮಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿಬಿ ಜಯಚಂದ್ರ ಈ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ದೊರೆಸ್ವಾಮಿ ಅವರಿಗೆ ಭರವಸೆ ನೀಡಿದರು. ನಂತರ ಸಂಜೆ ವಿಧಾನಸೌಧದದಲ್ಲಿ ಸಚಿವ ಜಯಚಂದ್ರ ಹಾಗೂ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ಅವರು ದೊರೆಸ್ವಾಮಿ ಹಾಗೂ ಇತರರೊಂದಿಗೆ ಸಭೆ ನಡೆಸಿದರು.
ಭೂ ಮಾಫಿಯಾಕ್ಕೆ ಕಡಿವಾಣ ಹಾಕಲು ಸರ್ಕಾರ ಸಿದ್ಧವಿದೆ ಎಂದು ದೊರೆಸ್ವಾಮಿ ಅವರಿಗೆ ಸಚಿವರು ಭರವಸೆ ನೀಡಿದರು. ಸರ್ಕಾರಿ ಭೂಮಿ ಒತ್ತುವರಿ ಕುರಿತು ಚರ್ಚೆ ನಡೆಸಿದ ಸಚಿವರು, 2011ರ ಭೂ ಒತ್ತುವರಿ ನಿಷೇಧ ವಿಧೇಯಕಕ್ಕೆ ಶೀಘ್ರ ಒಪ್ಪಿಗೆ ಪಡೆದು ಕಾಯ್ದೆ ರೂಪಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದೆ ಎಂದು ಟಿಬಿ ಜಯಚಂದ್ರ ಹೇಳಿದರು.
2011ರ ಭೂ ಒತ್ತುವರಿ ನಿಷೇಧ ವಿಧೇಯಕಕ್ಕೆ ಅನುಮೋದನೆ ದೊರೆತ ಬಳಿಕ, ಸರ್ಕಾರಿ ಭೂಮಿ ಒತ್ತುವರಿ ಕುರಿತು ತನಿಖೆ ನಡೆಸಲು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಗುವುದು ಎಂದು ಸಚಿವ ಜಯಚಂದ್ರ ಹೇಳಿದರು. ಸರ್ಕಾರ ಭರವಸೆ ನೀಡಿದ ಹಿನ್ನಲೆಯಲ್ಲಿ ಎಚ್.ಎಸ್.ದೊರೆಸ್ವಾಮಿ ತಮ್ಮ ಧರಣಿಯನ್ನು ಹಿಂಪಡೆದಿದ್ದಾರೆ.












Click it and Unblock the Notifications