ಸಿ.ಟಿ ರವಿಗೆ ಕ್ಲೀನ್ ಚೀಟ್ ನೀಡುವ ಶಂಕೆ: ಸಭಾಪತಿ ಮೇಲೆ ಎಎಪಿ ಆರೋಪ
ಬೆಂಗಳೂರು, ಡಿಸೆಂಬರ್ 24: ಬೆಳಗಾವಿಯ ಅಧಿವೇಶನದಲ್ಲಿ ನಡೆದ ಸಿ.ಟಿ .ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣದ ಖಂಡಿಸಿ ಆಮ್ ಆದ್ಮಿ ಕಾರ್ಯಕರ್ತರು ಪಕ್ಷದ ಕಚೇರಿಯ ಮುಂದೆ ಮಂಗಳವಾರ ಪ್ರತಿಭಟಿಸಿದರು. ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದ ಅವರು, 'ಸದನದ ಗೌರವ ಕಾಪಾಡಿ' ಎಂದು ಆಗ್ರಹಿಸಿದರು. ಸದನದಲ್ಲಿಯೇ ಸ್ತ್ರೀನಿಂದನೆ ಆಗಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಧರಣಿನಿರತರು ಕಳವಳ ವ್ಯಕ್ತಪಡಿಸಿದ್ದಾರೆ.
'ಸದನದ ಗೌರವ ಕಾಪಾಡಿ' ಎಂಬ ಘೋಷವಾಕ್ಯದಡಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಅವರು, ಸಿ.ಟಿ. ರವಿ ರವರ ಸ್ತ್ರೀನಿಂದನೆ, ನಂತರದಲ್ಲಿ ನಡೆದ ಎಲ್ಲಾ ಘಟನೆಗಳು ಶಾಂತಿಪ್ರಿಯ ಕರ್ನಾಟಕಕ್ಕೆ ಕಪ್ಪುಮಸಿ ಬಳಿದಂತಾಗಿದೆ ಎಂದು ದೂರಿದರು.

ಸದನದಲ್ಲಿಯೇ ಮಹಿಳೆ ಅದರಲ್ಲಿಯೂ ಪ್ರಮುಖ ಮಂತ್ರಿಯೊಬ್ಬರಿಗೆ ಈ ರೀತಿಯ ನಿಂದನೆ ಆಗುವುದಿದ್ದರೆ , ಮಹಿಳೆಯರಿಗೆ ಕರ್ನಾಟಕವು ಎಷ್ಟು ಸುರಕ್ಷಿತ ಎಂಬ ಅನುಮಾನ ಕಾಡುತ್ತದೆ. ಸಿ.ಟಿ. ರವಿ ವರ್ತನೆ ಯಾವುದೇ ನಾಗರೀಕ ಸಮಾಜ ಕ್ಷಮಿಸುವುದಿಲ್ಲ ಎಂದರು.
ಸಿಟಿ ರವಿಗೆ ಕ್ಲೀನ್ ಚಿಟ್ ನೀಡುವ ಕೆಲಸ?
ಮುಂದುವರೆದು ಸಭಾಪತಿಗಳು ತೆಗೆದುಕೊಂಡಿರುವ ರೂಲಿಂಗ್ ಸಹ ಪಕ್ಷಪಾತ ರೀತಿಯ ಅನುಮಾನ ರಾಜ್ಯದ ಜನತೆಗೆ ಕಾಡಲು ಆರಂಭಿಸಿದೆ. ಘಟನೆ ನಡೆದ ದಿನವೇ ರವಿಗೆ ಕ್ಲೀನ್ ಚಿಟ್ ನೀಡುವಂತಹ ಪ್ರಕ್ರಿಯೆಗಳು ಬಸವರಾಜ ಹೊರಟ್ಟಿ ಅವರಿಂದ ಆಗಿದೆ ಎಂದು ಆರೋಪಿಸಿದರು.
ನಂತರದ ದಿನಗಳಲ್ಲಿ ಸಭಾಪತಿಗಳ ನೇತೃತ್ವದಲ್ಲಿ ಅಲ್ಲಿದ್ದ ಎಲ್ಲಾ ಶಾಸಕರುಗಳನ್ನು ಕರೆಸಿ ವಿಚಾರಣೆ ನಡೆಸದೆ ಪಕ್ಷಪಾತ ಎನ್ನುವ ರೀತಿಯಲ್ಲಿ ತಮ್ಮ ರುಲಿಂಗ್ ನೀಡಿರುವುದು ಅನುಮಾನ ಮೂಡುವಂತಿದೆ ಎಂದು ಅವರು ಶಂಕಿಸಿದ್ದಾರೆ.
ಕೋಟ್ಯಾಂತರ ರೂಪಾಯಿಗಳ ಜನತೆಯ ತೆರಿಗೆ ಹಣವನ್ನು ಅನವಶ್ಯಕವಾಗಿ ಈ ರೀತಿ ಸದನದ ಗೌರವ ಹಾಳು ಮಾಡುವ ರೀತಿಯಲ್ಲಿ ದುರ್ವಿನಿಯೋಗವಾದರೆ ಆಮ್ ಆದ್ಮಿ ಪಕ್ಷ ಎಂದಿಗೂ ಸಹಿಸುವುದಿಲ್ಲ. ಶಾಸಕರುಗಳು ತಮ್ಮ ವೈಯಕ್ತಿಕ ದ್ವೇಷಗಳನ್ನು ಸಾಧಿಸಲು ಚಿಂತಕರ ಚಾವಡಿಯಂತಹ ಮೇಲ್ಮನೆಯನ್ನು ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರದೃಷ್ಟಕರ.
ಈ ರೀತಿಯ ಚಾರಿತ್ರ್ಯ ಹೀನ, ಭ್ರಷ್ಟ ವ್ಯಕ್ತಿಗಳು ಮೇಲ್ಮನೆಗೆ ಆಕಸ್ಮಿಕವಾಗಿ ಬರುತ್ತಿರುವುದನ್ನು ಎಲ್ಲ ಪಕ್ಷಗಳು ತಡೆಗಟ್ಟಬೇಕು. ಸದನದ ಗೌರವ ಕಾಪಾಡಬೇಕು ಎಮದು ಅವರು ಆಗ್ರಹಿಸಿದರು.












Click it and Unblock the Notifications