ಕನ್ನಡಿಗರು, ಮಠಾಧೀಶರ ಬೆಂಬಲ ಕೋರಿದ ಅನಂತ್
ಬೆಂಗಳೂರು, ಏ.1: ಪ್ರತಿಸ್ಪರ್ಧಿ ನಂದನ್ ನಿಲೇಕಣಿ ಅವರ ಚುನಾವಣಾ ಪ್ರಚಾರ, ನೂನ್ಯತೆಗಳನ್ನು ಬಲವಾಗಿ ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರು ಮುಂದಿನ ಹೆಜ್ಜೆ ಇಡುತ್ತಿದ್ದಾರೆ. ಕನ್ನಡತನ ಮುಂದಿಟ್ಟುಕೊಂಡು ಮತಯಾಚಿಸುತ್ತಿರುವ ಅನಂತ್ ಅವರು ವಿವಿಧ ಮಠಾಧೀಶರನ್ನು ಭೇಟಿ ಮಾಡುವುದರಲ್ಲಿ ಅನಂತ್ ಕುಮಾರ್ ನಿರತರಾಗಿದ್ದಾರೆ.
ಇತ್ತೀಚೆಗೆ ಬಿಪ್ಯಾಕ್ ಸಂವಾದ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹೆಚ್ಚು ಮಾತನಾಡಿರಲಿಲ್ಲ, ಈ ಬಗ್ಗೆ ಆಕ್ಷೇಪ, ಗೊಂದಲ, ಗದ್ದಲ ನಡೆದಿತ್ತು. ಇದನ್ನು ಮುಂದಿಟ್ಟುಕೊಂಡು ಅನಂತ್ ಕುಮಾರ್ ಅವರು ನಾನು ಕನ್ನಡ ಶಾಲೆ ವಿದ್ಯಾರ್ಥಿ ಎಂದು ಫೇಸ್ ಬುಕ್ ನಲ್ಲಿ ಹೇಳಿಕೊಂಡು ಮತಯಾಚಿಸಿದ್ದಾರೆ.
ನಂದನ್ ಅವರು ಇತ್ತೀಚೆಗೆ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಬಂದಿದ್ದರು. ಇದಾದ ನಂತರ ಅನಂತ್ ಕುಮಾರ್ ಅವರು ತಾವೂ ಕೂಡಾ ವಿವಿಧ ಮಠಗಳಿಗೆ ಭೇಟಿ ಕೊಟ್ಟಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಾಧೀಶರು, ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಶೃಂಗೇರಿ ಶ್ರೀಶಂಕರಾಚಾರ್ಯ ಪೀಠಂನ ಗುರೂಜಿಗಳ ಪಾದಗೆರಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಫೇಸ್ ಬುಕ್ ನಲ್ಲಿ ಅನಂತ್ ಅವರ ಪ್ರಚಾರದ ಭರಾಟೆಯ ಅಪ್ದೇಟ್ ಹಾಗೂ ಚಿತ್ರಗಳು ನಿಮ್ಮ ಮುಂದಿದೆ...

ನಾನು ಕನ್ನಡ ಶಾಲೆ ವಿದ್ಯಾರ್ಥಿ: ಅನಂತ್ ಕುಮಾರ್
ನಾನು ಕನ್ನಡದ ನೆಲದಲ್ಲೇ ಹುಟ್ಟಿ ಕನ್ನಡ ಶಾಲೆಯಲ್ಲೇ ಕಲಿತು, ಕನ್ನಡನಾಡಿನಲ್ಲೇ ವಿದ್ಯಾರ್ಥಿ ನಾಯಕನಾಗಿ, ಕರ್ನಾಟಕದಿಂದಲೇ ರಾಜಕಾರಣ ಪ್ರವೇಶಿಸಿದ ಅಚ್ಚ ಕನ್ನಡಿಗ. ನನ್ನ ವಿದ್ಯಾರ್ಥಿಪರ್ವದಲ್ಲಿ 'ಹೋತಾನಂದ' ಹೆಸರಿನಲ್ಲಿ ಪ್ರಕೃತಿ, ಬದುಕು, ಸಮಾಜದ ಬಗ್ಗೆ ಚೌಪದಿಗಳನ್ನು ಬರೆಯುತ್ತಿದ್ದೆ. ಈಗಲೂ, ಸಮಯ ಸಿಕ್ಕಿದರೆ ಬರೆಯಬಲ್ಲೆ ಅನ್ನಿ.
ಜೈ ಕರ್ನಾಟಕ !

ಸಂಸತ್ತಿನಲ್ಲಿ ಹಾಜರಾತಿ ಬಗ್ಗೆ ಅನಂತ್
15ನೇ ಲೋಕಸಭೆಯಲ್ಲಿ ನನ್ನ ಹಾಜರಿ ಶೇ. 87ರಷ್ಟಿತ್ತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ, ಮಧ್ಯಪ್ರದೇಶ ರಾಜ್ಯದ ಉಸ್ತುವಾರಿ ವಹಿಸಿಕೊಂಡು, ಕರ್ನಾಟಕದ ಹಿತಕ್ಕಾಗಿ ಹಲವು ವಿಷಯಗಳನ್ನು ಎತ್ತಿಕೊಂಡು ಹೋರಾಡುತ್ತಲೇ ನಾನು ಲೋಕಸಭೆಯ ಕಲಾಪಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ಭಾಗವಹಿಸಿದ್ದೇನೆ.

ಅಭ್ಯುದಯದಲ್ಲಿ ನನ್ನದೂ ಭಾಗಿತ್ವ ಇದೆ
ನನ್ನ ಪಕ್ಷದವರೇ ಆದ ಕೀರ್ತಿ ಆಜಾದ್ ಮತ್ತು ಯಶವಂತ್ ಸಿನ್ಹಾರವರೂ ಗರಿಷ್ಠ ಪ್ರಮಾಣದಲ್ಲಿ ಹಾಜರಿ ಹೊಂದಿರುವುದನ್ನೂ ನೀವು ಗಮನಿಸಬಹುದು. ಇಂಥ ಹಲವು ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ ಎಂಬುದು ಎಲ್ಲರಿಗೂ ಖುಷಿ ಕೊಡುವ ಸಂಗತಿ. ದೇಶದ ಶಾಸನರಚನೆಯಲ್ಲಿ, ದೇಶದ ಪ್ರಗತಿಯ ಹಾದಿಯಲ್ಲಿ, ದೇಶದ ಅಭ್ಯುದಯದಲ್ಲಿ ನನ್ನದೂ ಭಾಗಿತ್ವ ಇದೆ ಎಂಬ ಹೆಮ್ಮೆ, ಸಮಾಧಾನ ನನ್ನದು.

ಸಂಸದರಾಗಿ ಐದು ವರ್ಷದ ಸಾಧನೆ
ಅನಂತ್ ಅವರು ಹೇಳಿಕೊಂಡಂತೆ ಈ ಕೆಳಗಿನ ಯೋಜನೆಗಳು ಅವರ ಕಾಲದಲ್ಲಿ ಆಗಿದೆಯಂತೆ
* ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಾಮಕಾರಣ, ಎರಡನೇ ಹಂತದ ವಿಸ್ತರಣೆ
* ಬೆಂಗಳೂರಿನಲ್ಲಿ ಘನತ್ಯಾಜ್ಯ ನಿರ್ವಹಣೆ, ಕಸ ವಿಲೇವಾರಿ ಸ್ವಚ್ಛ ಬೆಂಗಳೂರು ಯೋಜನೆ
* ಬೆಂಗಳೂರಿನ ದಕ್ಷಿಣ ಕ್ಷೇತ್ರದ ಜನರಿಗೆ ಸುಲಭವಾಗಿ ಸಂಪರ್ಕಕ್ಕೆ ಸಿಗುವ ರಾಜಕಾರಣಿ ಎಂಬ ಹೆಮ್ಮೆ
* ಕಾವೇರಿ ನಾಲ್ಕನೇ ಹಂತದ ಪ್ರಕ್ರಿಯೆಗೆ ಚಾಲನೆ
* ನಮ್ಮ ಮೆಟ್ರೋ ಎರಡನೇ ಹಂತದ ಯೋಜನೆ
ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಪ್ರಚಾರ ಮಾಡುತ್ತಿರುವ ಅನಂತ್ ಈ ಮೇಲ್ಕಂಡ ವಿಷಯಗಳನ್ನು ಹೇಳಿಕೊಂಡಿದ್ದಾರೆ.

ಶಿವಕುಮಾರಸ್ವಾಮೀಜಿ ಹುಟ್ಟುಹಬ್ಬದ ಸಂಭ್ರಮ
ಅಂದಹಾಗೆ, ಏ.1 ರಂದು ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀಗಳಾದ ಶಿವಕುಮಾರ ಸ್ವಾಮೀಜಿ ಅವರು ತಮ್ಮ 107ನೇ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವಂತೆ ಶ್ರೀಗಳು ಸೂಚಿಸಿದ್ದರು ಎಂದು ತಿಳಿದು ಬಂದಿದೆ.












Click it and Unblock the Notifications