Sonu Nigam: ಕನ್ನಡ ಹಾಡು ಕೇಳಿದ್ದಕ್ಕೆ ಇದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು ಎಂದ ಸೋನು ನಿಗಮ್
ಸೋನು ನಿಗಮ್ ಹಿಂದಿಯವರಾದರೂ ಕನ್ನಡಿಗರು ಆತನ ಧ್ವನಿಯನ್ನು ಒಪ್ಪಿ ಅಪ್ಪಿಕೊಂಡಿದ್ದಾರೆ. ಹಿಂದಿ ಚಿತ್ರರಂಗ ಅವರನ್ನು ಕಡೆಗಣಿಸಿದರೂ ಕನ್ನಡಿಗರೂ ಮಾತ್ರ ಸೋನು ಧ್ವನಿಗೆ ಮನಸೋತಿದ್ದಾರೆ, ಪ್ರೀತಿ ಕೊಟ್ಟಿದ್ದಾರೆ. ನೂರಾರು ಕನ್ನಡ ಗೀತೆಗಳಿಗೆ ಸೋನು ನಿಗಮ್ ಧ್ವನಿಯಾಗಿದ್ದಾರೆ. ಆದರೆ ಅದೇ ಸೋನು ನಿಗಮ್ ಕನ್ನಡ ನೆಲದಲ್ಲಿ ಕನ್ನಡ ಹಾಡು ಕೇಳಿದ್ದಕ್ಕೆ ಉರಿದುಬಿದ್ದಿದ್ದಾರೆ. ಇದಕ್ಕೆ ಪಹಲ್ಗಾಮ್ ದಾಳಿ ಆಗಿದ್ದು ಎನ್ನುವ ಮೂಲಕ ಮೂರ್ಖತನ ತೋರಿಸಿದ್ದಾರೆ.
ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ಎಂದ ಮೇಲೆ ಕನ್ನಡ ಹಾಡು ಕೇಳುತ್ತಾರೆ. ಅದು ಸಹಜ ಕೂಡ, ಕನ್ನಡ ಹಾಡು ಹಾಡುವುದು ಸೋನು ನಿಗಮ್‌ಗೆ ಹೊಸದೇನೂ ಅಲ್ಲ. ಈ ಮೊದಲು ವೇದಿಕೆ ಮೇಲೆ ಸಾಕಷ್ಟು ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಆದರೂ ಕನ್ನಡ ಹಾಡು ಕೇಳಿದ್ದಕ್ಕೆ ಪಹಲ್ಗಾಮ್ ದಾಳಿಯನ್ನು ಉಲ್ಲೇಖಿಸುವ ಅಗತ್ಯವೇನಿತ್ತು ಎನ್ನುವುದೇ ದೊಡ್ಡ ಪ್ರಶ್ನೆ.

ಕನ್ನಡ, ಕನ್ನಡಿಗರು ಎಂದರೆ ಕೆಲವು ಉತ್ತರ ಭಾರತೀಯರು ವಿಷ ಕಾರುವುದು ಹೊಸದೇನೂ ಅಲ್ಲ. ದೊಡ್ಡ ಹಾಡುಗಾರ ಆದರೆ ಸಾಲದು, ಅದಕ್ಕೆ ತಕ್ಕಂತೆ ವರ್ತಿಸುವುದನ್ನೂ ಕಲಿಯಬೇಕು, ಪಹಲ್ಗಾಮ್ ದಾಳಿಗೂ, ಬೆಂಗಳೂರಿನಲ್ಲಿ ಕನ್ನಡ ಹಾಡು ಕೇಳುವುದಕ್ಕೆ ಏನು ಸಂಬಂಧ ಎಂದು ಸೋನು ನಿಗಮ್ ಉತ್ತರ ಕೊಡಬೇಕು.
ವ್ಯಾಪಕ ಆಕ್ರೋಶ
ಸೋನು ನಿಗಮ್ ದುರ್ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಹೊರಗಿನಿಂದ ಬಂದವರನ್ನು ಹೊತ್ತು ಮೆರೆಸಿದ್ದಕ್ಕೆ ಕನ್ನಡಿಗರಿಗೆ ಇಂತಹ ಬಹುಮಾನ ಸಿಗಬೇಕಾಗಿದ್ದೇ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್ ಕನ್ನಡದಲ್ಲಿ ಹಾಡಿರುವ ಹಾಡುಗಳಿಗೆ ಅಭಿಮಾನಿಗಳಾದವರಿಗೂ ಅವರ ವರ್ತನೆ ಅಚ್ಚರಿ ಮೂಡಿಸಿದೆ.
ಘಟನೆ ಬಗ್ಗೆ ಮಾತನಾಡಿರುವ ಸೋನು ನಿಗಮ್, ಅವರು ಹುಟ್ಟುವ ಮೊದಲಿನಿಂದಲೂ ನಾನು ಕನ್ನಡ ಹಾಡುಗಳನ್ನು ಹಾಡಿದ್ದೇನೆ, ಅವರು ಕನ್ನಡ ಕನ್ನಡ ಎಂದು ಒತ್ತಾಯ ಮಾಡಿದ್ದಕ್ಕೆ ಕೋಪ ಬಂತು. ಕನ್ನಡದ ಮೇಲೆ ನನಗೆ ಗೌರವ ಇದೆ ಎಂದು ಸಮರ್ಥನೆ ಕೂಡ ಕೊಟ್ಟಿದ್ದಾರೆ.
ಪೊಲೀಸರು ಸೋನು ನಿಗಮ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು. ಕೂಡಲೇ ಸೋನು ನಿಗಮ್ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸೋನು ನಿಗಮ್ ಕಾರ್ಯಕ್ರಮ ನಡೆದರೆ ಅಲ್ಲಿ ಕನ್ನಡ ಹಾಡುಗಳನ್ನು ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಲಾಗಿದೆ.












Click it and Unblock the Notifications