Bengaluru Second Airport: ಎರಡನೇ ಏರ್‌ಪೋರ್ಟ್‌ಗೆ ಹೊಸ ಜಾಗ ಸೂಚಿಸಿ ರಾಜ್ಯ ಸರ್ಕಾರಕ್ಕೆ ಸೋಮಣ್ಣ ಸೆಡ್ಡು, ಎಲ್ಲಿ?
ಬಹುನಿರೀಕ್ಷಿತ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣ ವಿಚಾರಕ್ಕೆ ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಕಚ್ಚಾಟ ಶುರುವಾಗಿದೆ. ಕೆಲವರು ಕನಕಪುರ ರಸ್ತೆ, ಬಿಡದಿ, ಕುಣಿಗಲ್ ರಸ್ತೆ, ತುಮಕೂರು, ಶಿರಾ ಸೇರಿದಂತೆ ಹಲವು ಭಾಗಗಳಲ್ಲಿ ಹೊಸ ಏರ್‌ಪೋರ್ಟ್ ನಿರ್ಮಾಣವಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮೂರು ಜಾಗಗಳನ್ನು ಅಂತಿಮಗೊಳಿಸಿದ್ದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ತಂಡ ಕೂಡ ಈ ಸ್ಥಳಗಳ ವೀಕ್ಷಣೆ ಮಾಡುತ್ತಿದೆ. ಈ ಹೊತ್ತಿನಲ್ಲೇ ಬಿಜೆಪಿಯ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹೊಸ ಬಾಂಬ್ ಸಿಡಿಸಿ, ರಾಜ್ಯ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ.
ಕನಕಪುರ ರಸ್ತೆ ಹಾಗೂ ನೆಲಮಂಗಲ ಕುಣಿಗಲ್ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತಿಸಿದೆ. ಇದಕ್ಕೆ ಕಾಂಗ್ರೆಸ್‌ನಲ್ಲೇ ವಿರೋಧವೂ ಇದೆ. ಜಿ.ಪರಮೇಶ್ವರ್, ಶಾಸಕ ಟಿಬಿ ಜಯಚಂದ್ರ ಸೇರಿದಂತೆ ಹಲವು ನಾಯಕರು ಈ ಏರ್‌ಪೋರ್ಟ್ ತುಮಕೂರು ಭಾಗದಲ್ಲಿ ನಿರ್ಮಾಣವಾಗಬೇಕು ಎಂದು ಧ್ವನಿ ಎತ್ತಿದ್ದಾರೆ. ಇದಕ್ಕೆ ಬಿಜೆಪಿ ಸಂಸದರೂ ಆಗಿರುವ ಕೇಂದ್ರ ಸಚಿವ ವಿ.ಸೋಮಣ್ಣ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಹೊಸ ಏರ್‌ಪೋರ್ಟ್‌ಗೆ ಹೊಸ ಜಾಗವೊಂದನ್ನು ಸಹ ಸೂಚಿಸಿದ್ದಾರೆ.

ಈ ಬಗ್ಗೆ ಇಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಚಿವ ವಿ.ಸೋಮಣ್ಣ, ಎರಡನೇ ವಿಮಾನ ನಿಲ್ದಾಣವನ್ನು ತುಮಕೂರಿನ ಶಿರಾದಲ್ಲಿ ಸ್ಥಾಪಿಸಿದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕಾಂಗ್ರೆಸ್‌ನ ಟಿಬಿ ಜಯಚಂದ್ರ ಅವರು ಹೇಳಿರುವುದಕ್ಕೆ ನನ್ನ ಸಹಮತ ಇದೆ. ಎರಡನೇ ವಿಮಾನ ನಿಲ್ದಾಣದ ಸಂಬಂಧ 34 ಶಾಸಕರು ನನಗೆ ಮನವಿ ಪತ್ರ ನೀಡಿದ್ದರು. ಟಿಬಿ ಜಯಚಂದ್ರ ಅವರೂ ಮನವಿ ಪತ್ರ ಕೊಟ್ಟಿದ್ದರು. ಅದನ್ನು ನಾನು ಕೇಂದ್ರ ನಾಗರೀಕ ವಿಮಾನಯಾನ ಸಚಿವರಾದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ಸಲ್ಲಿಸಿದ್ದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಇದೇ ವೇಳೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಏರಡನೇ ಏರ್‌ಪೋರ್ಟ್‌ಗೆ ಪ್ರಸ್ತಾವನೆ ನೀಡಿತ್ತು. ಅವರು ಎರಡೋ ಮೂರೋ ಜಾಗಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಇದಕ್ಕಾಗಿ ರಾಜ್ಯಕ್ಕೆ ಬಂದಿರು ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ಆ ಸ್ಥಳಗಳನ್ನು ನೋಡ್ತಾರೆ, ಸಾಧಕ ಬಾಧಕಗಳನ್ನು ಪರಿಶೀಲನೆ ಮಾಡುತ್ತಾರೆ ಎಂದು ಸೋಮಣ್ಣ ಹೇಳಿದ್ದಾರೆ.

ಬುಕ್ಕಾಪಟ್ಟಣ ಬಳಿ ಏರ್‌ಪೋರ್ಟ್‌ಗೆ ಸೂಕ್ತ ಸ್ಥಳ!
ಶಿರಾ ಭಾಗದಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಸಾಕಷ್ಟು ಅನುಕೂಲಗಳಿವೆ. ಶಿರಾ ಬಳಿಯೇ ಏರ್‌ಪೋರ್ಟ್ ಮಾಡಬೇಕು ಅಂತೇನಿಲ್ಲ. ಅದು ಕೂಡ ನನ್ನ ಲೋಕಸಭಾ ಕ್ಷೇತ್ರಕ್ಕೇ ಬರುತ್ತೆ. ಅಲ್ಲಿರುವ ಬುಕ್ಕಾಪಟ್ಟಣ ಎಂಬ ಪ್ರದೇಶ ಕೂಡ ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಸುಮಾರು 4,000 ಎಕರೆ ಒಳ್ಳೆಯ ಜಾಗ ಇದೆ. ಅಲ್ಲಿ ಯಾವುದೇ ಒಂದು ಬೆಟ್ಟ ಗುಡ್ಡ ಏನೇನೂ ಇಲ್ಲ. ತುಂಬಾ ಒಳ್ಳೆಯ ಪ್ರೈಮ್ ಲ್ಯಾಂಡ್, ಭಾರಿ ಚೆನ್ನಾಗಿದೆ. ಜಯಚಂದ್ರ ಅವರು ಕೂಡ ಇದನ್ನೇ ಹೇಳಿದ್ದಾರೆ. ಅವರ ಮಾತಿಗೆ ನನ್ನ ಸಹಮತವಿದೆ ಎಂದಿದ್ದಾರೆ.

ಕೇಂದ್ರದ ಮೇಲೆ ಒತ್ತಡ ತರುವೆ
ತುಮಕೂರು ಭಾಗಕ್ಕೆ ಏರ್‌ಪೋರ್ಟ್ ವಿಚಾರವಾಗಿ ಕೇಂದ್ರದ ಮೇಲೆ ಒತ್ತಡ ತಂದೇ ತರುತ್ತೇವೆ. ಈ ಸಂಬಂಧ ನಾನು ಈಗಾಗಲೇ ಕೇಂದ್ರದೊಂದಿಗೆ ಮಾತನಾಡಿದ್ದೇನೆ. ಪಕ್ಷದ ಬಹುತೇಕ ನಾಯಕರು ಕೂಡ ಹೇಳಿದ್ದಾರೆ. ಕೇಂದ್ರ ಸರ್ಕಾರವು ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತಂಡ ರಾಜ್ಯಕ್ಕೆ ಬಂದಿದೆ. ಎಲ್ಲ ಜಾಗಗಳನ್ನು ನೋಡ್ತಾರೆ. ಇದು ಇಷ್ಟಕ್ಕೇ ಸರಿ ಹೋಗುವ ವಿಚಾರವಲ್ಲ, ಅವರನ್ನು ಇಲ್ಲಿಗೂ ಬರುವಂತೆ ಮಾಡುವ ಕೆಲಸಕ್ಕೆ ನಾನು ಕೂಡ ಒತ್ತಡ ಹಾಕಲೇಬೇಕಿದೆ. ಏಕೆಂದರೆ ಇದು ನನ್ನ ಕರ್ತವ್ಯ ಎಂದು ರಾಜ್ಯ ಸರ್ಕಾರದ ವಿರುದ್ಧ ಸೋಮಣ್ಣ ತೊಡೆ ತಟ್ಟಿದ್ದಾರೆ.












Click it and Unblock the Notifications