ಶೋಭಾ ಹಿಲ್‌ವ್ಯೂನಲ್ಲಿ ಅಂತಾರಾಷ್ಟ್ರೀಯ ಯೋಗ, ಸಂಗೀತ ಮತ್ತು ಪರಿಸರ ದಿನದ ಸಂಭ್ರಮ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಲವು ಅಪಾರ್ಟ್‌ಮೆಂಟ್ಸ್ ಇವೆ. ಆದರೆ, ಸಾಮಾಜಿಕ ಕಳಕಳಿ ಹಾಗೂ ಸಾಂಸ್ಕೃತಿಕ, ರಾಷ್ಟ್ರ ಹಾಗೂ ಭಾಷಾ ಪ್ರೇಮವನ್ನು ಮೆರೆಯುವಂಥ ದಿನಗಳನ್ನು ಆಚರಿಸುವ ಕೆಲವೇ ಕೆಲವು ಅಪಾರ್ಟ್‌ಮೆಂಟ್ಸ್‌ನಲ್ಲಿ ಕನಕಪುರ ರಸ್ತೆಯ ಶೋಭಾ ಹಿಲ್ ವ್ಯೂ ಮುಂಚೂಣಿಯಲ್ಲಿ ನಿಲ್ಲುತ್ತದೆ. ಕನ್ನಡ ರಾಜ್ಯೋತ್ಸವ ಇರಬಹುದು, ಸಂಕ್ರಾಂತಿಯ ಆಚರಣೆ ಇರಬಹುದು. ವಸತಿ ಸಮುಚ್ಛಯ ನಿವಾಸಿಗಳು ಒಟ್ಟಾಗಿ ಆಚರಿಸುವುದು ಇಲ್ಲಿಯ ವಿಶೇಷ. ಆ ಮೂಲಕ ಮುಂದಿನ ಜನಾಂಗಕ್ಕೂ ನಮ್ಮ ಸನಾತನ ಧರ್ಮ, ಭಾಷೆಯ ಮೌಲ್ಯ ಮಹತ್ವವನ್ನು ತಿಳಿಸುವಲ್ಲಿ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಇದೀಗ ಒಂದೇ ದಿನ ಯೋಗ, ಸಂಗೀತ ಹಾಗೂ ಪರಿಸರವನ್ನು ದಿನವನ್ನು ಆಚರಿಸುವ ಮೂಲಕ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಹಿಲ್‌ವ್ಯೂ ನಿವಾಸಿಗಳು ಮತ್ತೊಮ್ಮೆ ತಮ್ಮಲ್ಲಿರುವ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ.
ಈ ಅಪಾರ್ಟ್‌ಮೆಂಟ್ ನಿವಾಸಿಗಳು ಕೇವಲ ತಮ್ಮ ಸಮುಚ್ಛಯದವರನ್ನು ಮಾತ್ರವಲ್ಲ, ಸುತ್ತಮುತ್ತಲಿನ ಜನರನ್ನೂ ಸೇರಿಸಿಕೊಂಡು ಇಂಥ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತೊಂದು ವಿಶೇಷ. ರಸ್ತೆಯ ಇಕ್ಕೆಲಗಳಲ್ಲಿ ಗಿಡ ನೆಡುವುದು, ಜನರಲ್ಲಿ ಪರಿಸರದ ಕಾಳಜಿ ವಹಿಸಲು ಪ್ರೇರೇಪಿಸುವ ಜೊತೆಗೆ ಸಮೀಪದ ಕೆರೆಗಳ ಪುನರುಜ್ಜೀವನಕ್ಕೂ ಇಲ್ಲಿಯ ಕೆಲವು ನಿವಾಸಿಗಳು ಕಾರ್ಯೋನ್ಮುಖರಾಗಿರುವುದು ಮತ್ತೊಂದು ವಿಶೇಷ. ಇಂಥ ಪರಿಸರ ರಕ್ಷಣಾ ಕಾರ್ಯಕ್ರಮಗಳಲ್ಲಿ ಸದಾ ಮುಂದೆ ನಿಂತು, ವಾರವೂ ಬಿಡದೇ ಅನೇಕ ಸ್ವಚ್ಛತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ, ತಲಘಟ್ಟಪುರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀಮತಿ ಚೈತನ್ಯ ಮತ್ತು ಶ್ರೀ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ಸಮಾಜ ಸೇವೆಯಲ್ಲಿನ ಅವರ ಸಮರ್ಪಣೆ ಮತ್ತು ಪ್ರೇರಣಾದಾಯಕ ಕಾರ್ಯಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಮಾದರಿಯಾಗಿದ್ದವು.

ಯೋಗ ಶಿಕ್ಷಕಿ ಶ್ರೀಮತಿ ಶ್ರೀಜಾ ಮನೋಜ್ ಮಾರ್ಗದರ್ಶನದಲ್ಲಿ ನಿವಾಸಿಗಳು, ಅದರಲ್ಲಿಯೂ ಮಕ್ಕಳು ಯೋಗ ಪ್ರದರ್ಶನ ನೀಡಿದರು. ಭಾರತಕ್ಕೆ ವರವಾಗಿರುವ ಯೋಗದ ಮಹತ್ವ ಜೊತೆಗೆ ಇದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯಾಕೆ ಅಗತ್ಯ ಎಂಬುದನ್ನು ಒತ್ತಿ ಹೇಳುವಲ್ಲಿ ಯೋಗ ದಿನ ಸುಸಂಪನ್ನವಾಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶೋಭಾ ಹಿಲ್‌ವ್ಯೂ ಬಾಲಭಾರತಿ ಮಕ್ಕಳಿಂದ ನಡೆದ ಯೋಗ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳಿಂದ ಸುಮಧುರ ಗೀತೆಗಳ ಗಾಯನ, ಆಕರ್ಷಕ ವೇಷಭೂಷಣ ಪ್ರದರ್ಶನ ಹಾಗೂ ಹಿರಿಯ ನಾಗರಿಕರಿಂದ ಪ್ರದರ್ಶಿಸಲಾದ ಚಿಂತನಾತ್ಮಕ ನಾಟಕ ಎಲ್ಲರ ಗಮನ ಸೆಳೆಯಿತು. ಪರಿಸರ ದಿನಾಚರಣೆ ಅಂಗವಾಗಿ, ನಿರ್ವಹಣಾ ಸಮಿತಿಯು SHV ಆವರಣದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇದು ಪರಿಸರದ ಜವಾಬ್ದಾರಿಯ ಸಂದೇಶವನ್ನು ಸಾರುವುದರೊಂದಿಗೆ, ಸುತ್ತಮುತ್ತಲಿನ ಪರಿಸರ ಹಸಿರಾಗಿದ್ದರೆ ಏನೇನು ಲಾಭ ಎನ್ನುವುದನ್ನು ಸಾರಿ ಹೇಳಿತು. ಬೆಂಗಳೂರಿನ ಜನನಿಬಿಡ ಪ್ರದೇಶದಿಂದ ಸ್ವಲ್ಪ ಹೊರ ವಲದಿಯದಲ್ಲಿರುವ ಈ ಅಪಾರ್ಟ್‌ಮೆಂಟ್‌ನಲ್ಲಿ ಮಳೆ ಕುಯ್ಲು ಮೂಲಕ ನೀರಿನ ಸಂರಕ್ಷಣಾ ಕಾರ್ಯ ನಡೆಯುತ್ತಿದ್ದು, ಸುತ್ತಲೂ ಗಿಡ-ಮರಗಳನ್ನು ಕಾಪಾಡಿಕೊಂಡು, ನಿವಾಸಿಗಳು ಶುದ್ಧ ಗಾಳಿ ಉಸಿರಾಡುವಂತೆ ಮಾಡಲಾಗುತ್ತಿದೆ. ಅಲ್ಲದೇ ಪ್ರಕೃತಿ ಸಂರಕ್ಷಣೆ ಮತ್ತು ಸ್ವಚ್ಛ ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮೆರವಣಿಗೆಯನ್ನೂ ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ RRR ಮಾಡಿ ತಂಡವು 'Refuse, Reduce & Repair' ಅಭಿಯಾನವನ್ನು SHV ಆವರಣದಲ್ಲಿ ನಡೆಸಿ, ಸುಸ್ಥಿರ ಜೀವನಶೈಲಿಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಯಿತು. ಆರೋಗ್ಯ, ಸಂಗೀತ, ಸಂಸ್ಕೃತಿ ಮತ್ತು ಪರಿಸರ ಜಾಗೃತಿಯ ಸುಂದರ ಸಂಯೋಜನೆಯಾಗಿದ್ದ ಈ ಕಾರ್ಯಕ್ರಮ ಎಲ್ಲರಿಗೂ ಸ್ಮರಣೀಯ ಕ್ಷಣಗಳನ್ನು ನೀಡಿತು. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಸಮುದಾಯದ ಒಗ್ಗಟ್ಟು ಮತ್ತು ಸುಸ್ಥಿರ ಬದುಕಿನ ಅರಿವು ಮೂಡಿಸಿದ ಅರ್ಥಪೂರ್ಣ ದಿನವಾಗಿಸುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಯಿತು.














Click it and Unblock the Notifications