ಸಿದ್ದರಾಮಯ್ಯ Unpolished Diamond ಎಂದಿದ್ದ ಎಸ್ಸೆಂ ಕೃಷ್ಣ!
ಎಸ್.ಎಂ. ಕೃಷ್ಣರಿಂದ ಸಿದ್ದರಾಮಯ್ಯ ಅವರ ಬಗ್ಗೆ ಅಲ್ ಪಾಲಿಷ್ಡ್ ಡೈಮಂಡ್ ಎಂದು ಶ್ಲಾಘನೆ. ಮಾಧ್ಯಮಗಳ ಮುಂದೆ ನೆನಪಿಸಿಕೊಂಡ ಮಾಜಿ ಸಚಿವ ಎಚ್. ವಿಶ್ವನಾಥ್.
ಬೆಂಗಳೂರು, ಜೂನ್ 23: 'ಸಿದ್ದರಾಮಯ್ಯ ಈಸ್ ಆ್ಯನ್ ಅನ್ ಪಾಲಿಶ್ಡ್ ಡೈಮಂಡ್' ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು, ಸಿದ್ದರಾಮಯ್ಯ ಅವರನ್ನು ಬಣ್ಣಿಸಿದ್ದರಂತೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮದವರೊಂದಿಗೆ ಸಂಧಾನ ಸಭೆ ನಡೆಸಿದ ವಿಶ್ವನಾಥ್ ಹೀಗೆ ಹೇಳಿದರು. ಅವರು ಹೇಳಿದ ಪ್ರಕಾರ, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಗೆ ಬರಮಾಡಿಕೊಳ್ಳುವ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಅಷ್ಟು ಆಸಕ್ತಿ ಇರಲಿಲ್ಲ.

ಆದರೆ, ಸಿದ್ದರಾಮಯ್ಯ ಅವರ ಪರವಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಅಪಾರ ಆಸಕ್ತಿ ವಹಿಸಿದ್ದರು. ಜಾಫರ್ ಷರೀಫ್ ಕೂಡ ಮೊದಲಿಗೆ ಅಸಮ್ಮತಿ ತೋರಿದ್ದರೂ ಆನಂತರ ಮನವೊಲಿಕೆಯ ನಂತರ ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಸಹಕರಿಸಿದರು ಎಂದು ವಿಶ್ವನಾಥ್ ಹೇಳಿದರು.
ಇಲ್ಲಿ ರಾಜ್ಯ ನಾಯಕರು ಒಂದಾಗಿ ಸೋನಿಯಾ ಮೇಡಂ ಬಳಿ ಹೋಗಿ ಚರ್ಚಿಸಲು ಮುಂದಾದರು. ಬೆಂಗಳೂರಿನಿಂದ ಜಾಫರ್ ಷರೀಫ್, ವಿಶ್ವನಾಥ್ ಮುಂತಾದವರು ಹೊರಟರೆ, ಮಹಾರಾಷ್ಟ್ರದ ಆಗಿನ ರಾಜ್ಯಪಾಲರಾಗಿದ್ದ ಎಸ್.ಎಂ. ಕೃಷ್ಣ ಅವರು, ಮುಂಬೈನಿಂದ ದೆಹಲಿಗೆ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಮಾತುಕತೆ ಶುರುವಾಗಿ ಹಲವಾರು ನಿಮಿಷಗಳು ಕಳೆದರೂ, ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಕುರಿತಂತೆ ದ್ವಂದ್ವ ಮನಸ್ಕರಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ, ''ಮೇಡಂ. ನೀವು ನಂಬುವಿರೋ ಇಲ್ಲವೋ ಗೊತ್ತಿಲ್ಲ. ಸಿದ್ದರಾಮಯ್ಯ ಈಸ್ ಆ್ಯನ್ ಅನ್ ಪಾಲಿಷ್ಡ್ ಡ್ ಡೈಮಂಡ್'' ಎಂದರು. ಈ ಮಾತು ಸೋನಿಯಾ ಗಾಂಧಿಯವರ ಮೇಲೆ ಪರಿಣಾಮ ಬೀರಿತು. ಆಗಲೇ, ಅವರು ಸಿದ್ದರಾಮಯ್ಯನವರ ಕಾಂಗ್ರೆಸ್ ಸೇರ್ಪಡೆಗೆ ಹಸಿರು ನಿಶಾನೆ ತೋರಿದರು ಎಂದು ವಿಶ್ವನಾಥ್ ತಿಳಿಸಿದರು.
ಇಷ್ಟೆಲ್ಲಾ ಹೇಳಿದ, ವಿಶ್ವನಾಥ್, ಕಡೆಪಕ್ಷ ಎಸ್ ಎಂ ಕೃಷ್ಣ ಅವರ ಈ ವಕಾಲತ್ತಿಗಾದರೂ ಕೃತಜ್ಞತೆ ಇಟ್ಟುಕೊಳ್ಳಲಿಲ್ಲವಲ್ಲ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.












Click it and Unblock the Notifications