Prajwal Revanna: ಪ್ರಜ್ವಲ್ ರೇವಣ್ಣ ಬಂಧನದ ಅಪ್ಡೇಟ್ ಕೊಟ್ಟ ಜಿ.ಪರಮೇಶ್ವರ
ಬೆಂಗಳೂರು, ಮೇ 29: ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಹುಡುಕುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಮರಳುವುದಾಗಿ ವಿಡಿಯೋ ಮೂಲಕ ಹೇಳಿದ್ದಾರೆ. ಇದರ ಬೆನ್ನಲ್ಲೆ ಅವರ ಬಂಧನ ಕುರಿತು ಅಪ್ಡೇಟ್ ಮಾಹಿತಿಯೊಂದು ಹೊರ ಬಿದ್ದಿದೆ.
ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ಕುರಿತು ಬುಧವಾರ ಮಾತನಾಡಿರುವ ಜಿ.ಪರಮೇಶ್ವರ್ ಅವರು, ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಬಂಧನಕ್ಕೆ ಪಕ್ಷ ಎಂಬುದು ಬರುವುದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಅಂತವರನ್ನು ಬಂಧಿಸಲಾಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಜನತಾದಳ, ಬಿಜೆಪಿ ಎಂಬುದಕ್ಕಿಂತ ಹೆಚ್ಚಾಗಿ, ಈ ಪ್ರಕರಣದಲ್ಲಿ ಯಾರು ಭಾಗಿಯಾಗಿರುವುದು ಕಂಡು ಬರುತ್ತದೆಯೋ ಅಂತವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತದೆ. ಈಗಾಗಲೇ ಪ್ರಕರಣದಲ್ಲಿ 11-12 ಜನರನ್ನು ಬಂಧಿಸಲಾಗಿದೆ ಎಂದರು.
ಬಂಧನದ ಅಪ್ಡೇಟ್ ಏನು?
ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ವಾಪಸ್ ದೇಶಕ್ಕೆ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜ್ವಲ್ ವಿರುದ್ಧ ವಾರಂಟ್ ಜಾರಿಯಾಗಿರುವುದರಿಂದ ಬಂಧಿಸಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಎಸ್ಐಟಿಯವರು ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ಅಪ್ಡೇಟ್ ಮಾಹಿತಿ ನೀಡಿದರು.
ಎಮ್‌ಎಲ್‌ಸಿ ಅಭ್ಯರ್ಥಿಗಳ ಆಯ್ಕೆ ವಿಚಾರದ ಕುರಿತು ಮಾತನಾಡಿ, ನನ್ನ ಹೇಳಿಕೆಯನ್ನು ಯಾರು ತಪ್ಪಾಗಿ ಅರ್ಥೈಸಿಕೊಳ್ಳಬೇಕಾದ ಅಗತ್ಯ ಇಲ್ಲ. ಪ್ರಮುಖರೊಂದಿಗೆ ಸಮಾಲೋಚನೆ ಅಭ್ಯರ್ಥಿಗಳ ಆಯ್ಕೆ ಮಾಡಬೇಕಾದುದು ಪ್ರಕ್ರಿಯೆ. ಯಾರು ಸಹ ಇದನ್ನು ತಪ್ಪು ಅಂತ ಹೇಳಲಾಗುವುದಿಲ್ಲ. ನಾನು ಸಹ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿದ ಅನುಭವದಿಂದ ಆ ಮಾತನ್ನು ಹೇಳಿದ್ದೇನೆ. ನಾವು ಹೇಳಿದವರಿಗೆ ಅವಕಾಶ ನೀಡಬೇಕು ಅಂತ ಹೇಳಲು ಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಪಕ್ಷಕ್ಕಾಗಿ ದುಡಿದವರ ಜತೆ ಸಮಾಲೋಚಿಸಬೇಕು
ಯಾರು ಪಕ್ಷಕ್ಕಾಗಿ ದುಡಿದಿದ್ದಾರೋ, ಯಾವ ಸಮುದಾಯ ಪಕ್ಷದ ಜೊತೆ ನಿಂತಿದೆಯೋ ಅಂತವರಿಗೆ ಅವಕಾಶ ಕಲ್ಪಿಸಬೇಕು. ಪಕ್ಷಕ್ಕಾಗಿ ಕೆಲಸ ಮಾಡಿದ ಅನೇಕರಿಗೆ ಅನುಭವ ಇರುತ್ತದೆ. ಅಂತವರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆಯಬೇಕು ಎಂಬುದನ್ನು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ನನ್ನ ಅಭಿಪ್ರಾಯವನ್ನು ನಾನು ಹೇಳಿಬಿಟ್ಟಿದ್ದೇನೆ. ಏಳು ಸ್ಥಾನಗಳು ನಮ್ಮ ಪಕ್ಷಕ್ಕೆ ಬರುತ್ತವೆ. 300 ಅರ್ಜಿ ಬಂದಿವೆ ಎಂಬುದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಆಯ್ಕೆ ಮಾಡುವುದು ಕಷ್ಟದ ಕೆಲಸ. ಹೈಪವರ್ ಕಮಿಟಿ ರಚಿಸಿ, ಸಮಿತಿ ಜೊತೆ ಚರ್ಚಿಸಿದರೆ ಸಲಹೆಗಳು ಬರುತ್ತವೆ. ಹೈಪವರ್ ಕಮಿಟಿ ರಚಿಸುವ ಸಮಯ ಮೀರಿದೆ ಎಂದರು.

ಸಿಎಂ ಸಲಹೆ ಪಡೆದು ನಿರ್ಧಾರ
ಎಂಎಲ್‌ಸಿ ಸ್ಥಾನದ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಲ್ಲ. ಇಲಾಖೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳಿವೆ. ಯಾವುದಾದರು ತೀರ್ಮಾನ ತೆಗೆದುಕೊಳ್ಳುವಾಗ ಮುಖ್ಯಮಂತ್ರಿಯವರ ಗಮನಕ್ಕೆ ತರಬೇಕಾಗುತ್ತದೆ. ಅವರ ಸಲಹೆ ಪಡೆದು ನಿರ್ಧರಿಸಬೇಕಾಗುತ್ತದೆ.
ತಮಗೆ ವಹಿಸಿದ ಸೂಕ್ತ ಜವಾಬ್ದಾರಿಯನ್ನು ಅಧಿಕಾರಿಗಳು ಮಾಡದೇ ಇದ್ದಾಗ, ಅದರಿಂದ ಬೇರೆ ಬೇರೆ ರೀತಿಯ ತೊಂದರೆಗಳಾದ ಅಮಾನತುಗೊಳಿಸಲಾಗುತ್ತದೆ. ಇಲಾಖಾ ವಿಚಾರಣೆ ನಡೆಯುತ್ತದೆ. ದೊಡ್ಡ ಪ್ರಕರಣಗಳಲ್ಲಿ ಸಿಐಡಿಯವರು ತನಿಖೆ ಮಾಡುತ್ತಾರೆ. ತನಿಖೆಯ ವರದಿಯಲ್ಲಿ ತಪ್ಪು ಕಂಡು ಬಂದಿಲ್ಲ ಎಂದಾದರೆ ಅಮಾನತು ಆದೇಶ ಪಡೆಯಲಾಗುತ್ತದೆ. ಇದು ಇಲಾಖೆಯಲ್ಲಿ ನಡೆಯುವ ಪ್ರಕ್ರಿಯೆ ಎಂದು ಬೆಳ್ಳೂರು ಕ್ರಾಸ್ ಪ್ರಕರಣದ ಕುರಿತು ಅವರು ಉತ್ತರಿಸಿದರು.
ತನಿಖೆಯಿಂದ ಅಧಿಕಾರಿ ಸಾವಿನ ಪ್ರಕರಣ ಬೆಳಕಿಗೆ
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣದ ಕುರಿತು ಮಾತನಾಡಿ, ಸಿಐಡಿಯಿಂದ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಬೇರೆ ಬೇರೆ ಐಟಿ ಕಂಪನಿಗಳಿಗೆ ವರ್ಗಾವಣೆಯಾಗಿರುವ ಆರೋಪ ತನಿಖೆಯಿಂದ ಹೊರಬರುತ್ತದೆ ಎಂದರು
ಒಂದೊಂದು ಘಟನೆಯಾದಗೂ ವಿಪಕ್ಷದವರು ರಾಜೀನಾಮೆ ಕೇಳುತ್ತಾರೆ. ಹಣ ವರ್ಗಾವಣೆಗೆ ಮೌಖಿಕವಾಗಿ ಆದೇಶ ಕೊಟ್ಟಿದ್ದಾರೆ ಎಂಬ ಆರೋಪ ತನಿಖೆಯಲ್ಲಿ ಸಾಬೀತಾದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈಶ್ವರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಅವರ ಹೆಸರನ್ನು ನೇರವಾಗಿ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಸಚಿವರ ಹೆಸರನ್ನು ಎಲ್ಲಿಯೂ ನೇರವಾಗಿ ಹೇಳಿಲ್ಲ. ತನಿಖೆ ಆಗುವವರೆಗೂ ಕಾಯಬೇಕು ಎಂದು ಹೇಳಿದರು.












Click it and Unblock the Notifications