Siddaramaiah: ಮಂಡಿ ನೋವಿನಿಂದ ಉಮಾಶ್ರೀ ಹೆಗಲ ಸಪೋರ್ಟ್ ಪಡೆದು ನಡೆದ ಸಿದ್ದರಾಮಯ್ಯ
ಬೆಂಗಳೂರು ಮಾರ್ಚ್ 2: ಮಂಡಿ ನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಫಿಲ್ಮ್ ಫೆಸ್ಟಿವಲ್‌ಗೆ ಆಗಮಿಸಿದ ವೇಳೆ ನಟಿ ಉಮಾಶ್ರೀ ಹೆಗಲ ಸಪೋರ್ಟ್ ಪಡೆದ ದೃಶ್ಯ ಕಂಡು ಬಂದಿದೆ. ಕಾರಿನಲ್ಲಿ ತಮ್ಮ ಹಲವಾರು ಪಿಎಗಳೊಂದಿಗೆ ಬಂದ ಸಿದ್ದರಾಮಯ್ಯ ಅವರನ್ನು ಉಮಾಶ್ರೀ ಮಾತನಾಡಿಸಲು ಮುಂದಾದರು.
ಈ ಸಮಯದಲ್ಲಿ ಸಿದ್ದರಾಮಯ್ಯ ಅವರು ಉಮಾಶ್ರೀ ಕೈ ಹಿಡಿದು ನಡೆದಿದ್ದಾರೆ. ಜೊತೆಗೆ ಉಮಾಶ್ರೀ ಹೆಗಲನ್ನು ಆಸರೆಯಾಗಿ ಕೈ ಹಾಕಿ ಮುಂದೆ ಸಾಗಿದ್ದು ಕಂಡು ಬಂದಿದೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಬೆಂಗಳೂರಿನಲ್ಲಿ ಫಿಲ್ಮ ಫೆಸ್ಟಿವಲ್ ಆರಂಭವಾಗಿದೆ. ಇಡೀ ಜಗತ್ತಿನ ಸಿನಿಮಾನಾ ಒಟ್ಟಿಗೆ ಸೇರಿಸುವ ಬೆಂಗಳೂರು ಫಿಲ್ಮ್ ಫೆಸ್ಟಿವಲ್‌ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಈ ವೇಳೆ ಸಿನಿಮಾದ ಹಲವಾರು ಗಣ್ಯರು ಭಾಗಿಯಾಗಿದ್ದರು. ಒಂದು ವಾರ ಸಿಲಿಕಾನ್ ಸಿಟಿಯಲ್ಲಿ ಫಿಲ್ಮ್ ಫೆಸ್ಟಿವಲ್ ನಡೆಯಲಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್‌ಗೆ ವಿಶ್ವ ಮಾನ್ಯತೆ ಸಿಕ್ಕಿದ್ದು, ವಿದೇಶಿ ಸಿನಿಮಾಗಳೂ ನಮ್ಮೂರ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗೋಕೆ ಪೈಪೋಟಿ ನಡೆಸ್ತಿವೆ. ಈ ಮಟ್ಟಿಗಿನ ಖ್ಯಾತಿ, ಗೌರವದಿಂದಲೇ ಯಶಸ್ವಿಯಾಗಿ, ಈಗ 16ನೇ ಆವೃತ್ತಿಗೆ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಕಾಲಿಟ್ಟಿದ್ದು, ಅದ್ಧೂರಿ ಚಾಲನೆ ಸಿಕ್ಕಿದೆ.
ಸುಮಾರು 60 ದೇಶಗಳ, 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಫಿಲ್ಮ್ ಫೆಸ್ಟಿವಲ್ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿದ್ದು, ಒಂದು ವಾರ ಪೂರ್ತಿ ಸಿನಿಮಾ ಸುಗ್ಗಿ ನಡೆಯಲಿದೆ. ತಿಂಗಳುಗಳ ಕಾಲ ಎಲ್ಲಾ ಭಾಷೆಯ ಸಿನಿಮಾಗಳ ವೀಕ್ಷಿಸಿ, ವಿಮರ್ಶಿಸಿ ದಿ ಬೆಸ್ಟ್ ಸಿನಿಮಾಗಳನ್ನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಎಲ್ಲರೂ ಈ ಅವಕಾಶ ಉಪಯೋಗಿಸಿಕೊಳ್ಳಿ ಅನ್ನೋದು ರಾಜ್ಯ ಸರ್ಕಾರದ ಆಶಯ.
"ಸರ್ವಜನಾಂಗದ ಶಾಂತಿಯ ತೋಟ" ಎಂಬ ಧ್ಯೇಯವಾಕ್ಯದೊಂದಿಗೆ ಈ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯುತ್ತಿದೆ. ಶನಿವಾರ ಸಂಜೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು. ಚಲನಚಿತ್ರೋತ್ಸವದ ಕೈಪಿಡಿಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು.
ಈ ಚಲನಚಿತ್ರೋತ್ಸವದಲ್ಲಿ 13 ಪರದೆಗಳಲ್ಲಿ ಸುಮಾರು 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳ 400 ಪ್ರದರ್ಶನಗಳು ನಡೆಯುತ್ತವೆ. ರಾಜಾಜಿನಗರದ ಒರಾಯನ್ ಮಾಲ್‌ನ ಪಿವಿಆರ್ ಸಿನಿಮಾಸ್, ಚಾಮರಾಜಪೇಟೆಯ ಡಾ.ರಾಜ್‌ಕುಮಾರ್ ಭವನ ಹಾಗೂ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಈ ಸಿನಿಮಾಗಳ ಪ್ರದರ್ಶನ ನಡೆಯಲಿದೆ.












Click it and Unblock the Notifications