Siddaramaiah: ಎಡಗೈ ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ, ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?
ಬೆಂಗಳೂರು, ಮೇ 12: ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಡಗೈ ನೋವಿನಿಂದ ಬಳಲುತ್ತಿದ್ದಾರೆ. ಅವರ ನಿವಾಸಕ್ಕೇ ಆಗಮಿಸಿರುವ ವೈದ್ಯರು ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಭಯವಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯನವರ ಎಡ ಕೈಯಿಗೆ ವೈರಲ್ ಹರ್ಪಿಸ್ (viral herpes) ಇನ್ಪೆಕ್ಷನ್‌ನಿಂದ ಊದುಕೊಂಡಿದೆ. ಇದರಿಂದ ಅವರು ನೋವು ಅನುಭವಿಸುತ್ತಿದ್ದಾರೆ. ಈ ಸಲುವಾಗಿ ಶುಕ್ರವಾರ ಸಿದ್ದರಾಮಯ್ಯನವರ ಕುಮಾರ ಕೃಪಾ ರಸ್ತೆಯಲ್ಲಿನ ನಿವಾಸಕ್ಕೆ ಆಪ್ತ ವೈದ್ಯರು ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಅಗತ್ಯ ತಪಾಸಣೆಗಳನ್ನು ಸಹ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಮೇ 10ರಂದು ನಡೆದಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ಸಂಬಂಧ ತಮ್ಮ ವರುಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಹ ಅವರು ಪ್ರಚಾರ ನಡೆಸಿದ್ದರು. ಹೀಗೆ ಕೊಪ್ಪಳದಲ್ಲಿ ಪ್ರಚಾರ ಕಾರ್ಯದಲ್ಲಿದ್ದಾಗ ನೂಕು ನುಗ್ಗಲು ಉಂಟಾಗಿತ್ತು.
ಈ ಗದ್ದಲದಲ್ಲಿ ಸಿದ್ದರಾಮಯ್ಯನವರ ಕೈಗೆ ಪೆಟ್ಟಾಗಿತ್ತು. ಹೀಗಿದ್ದರೂ ಪ್ರಚಾರ ಕಾರ್ಯ ಕೈ ಬಿಡದೇ ನಡೆಸಿದ್ದರು. ವಿಶ್ರಾಂತಿ ಮಾಡದ ಪರಿಣಾಮ ಈಗ ಇನ್ಪೆಕ್ಷನ್ ಆಗಿದೆ. ಕೈ ಊದಿಕೊಂಡಿದೆ. ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯ ರವಿ ಕುಮಾರ್, ಅವರ ಕೈ ಊದಿಕೊಂಡಿದ್ದು, ಚಿಕಿತ್ಸೆ ಕೊಡಲಾರಂಭಿಸಿದ ಬಳಿಕ ಕೊಂಚ ಕಡಿಮೆಯಾಗಿದೆ. ಅವರಿಗೆ ಸುಮಾರು 15 ದಿನಗಳ ವಿಶ್ರಾಂತಿ ಅಗತ್ಯವಿದೆ. ಇದರ ಹೊರತು ಅವರು ಆರೋಗ್ಯವಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ನಾಳೆ ಶನಿವಾರ ಮತ ಎಣಿಕೆ ಆರಂಭವಾಗಲಿದೆ. ಈ ಸಂಬಂಧ ಅವರು ಇಂದು ಶುಕ್ರವಾರ ಸಂಜೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಕೈ ನೋವಿಗಾಗಿ ಚಿಕಿತ್ಸೆ ಪಡೆಯುತ್ತಿರುವ ಅವರು ವಿಶ್ರಾಂತಿ ನಡುವೆಯು ಸ್ವ ಕ್ಷೇತ್ರದತ್ತ ತೆರಳಲಿದ್ದಾರೆ.












Click it and Unblock the Notifications