ರಾಜಭವನದಲ್ಲೂ ಲಾಡ್ ಸಮರ್ಥಿಸಿಕೊಂಡ ಸಿದ್ದರಾಮಯ್ಯ!
ಬೆಂಗಳೂರು, ನ.7 : ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಸಚಿವ ಸಂತೋಷ್ ಲಾಡ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿರುವ ಅವರು, ಅಲ್ಲಿಯೂ ಲಾಡ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ ಸಿಎಂ ಸಿದ್ದರಾಮಯ್ಯ ರಾಜಭವನಕ್ಕೆ ಭೇಟಿ ನೀಡಿದ್ದರು. ಹಂಸರಾಜ್ ಭಾರದ್ವಾಜ್ ಅವರೊಂದಿಗಿನ ಮಾತುಕೆ ವೇಳೆ ಸಚಿವ ಲಾಡ್ ವಿಚಾರವೂ ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ. ಅಕ್ರಮ ಗಣಿಗಾರಿಕೆ ನಂಟು ಹೊಂದಿರುವ ವ್ಯಕ್ತಿಗಳು ಸಂಪುಟದಲ್ಲಿ ಇದ್ದರೆ ಸರ್ಕಾರಕ್ಕೆ ತೊಂದರೆ ಎಂದು ರಾಜ್ಯಪಾಲರು ಸಿಎಂಗೆ ಸಲಹೆ ನೀಡಿದ್ದಾರೆ.

ಹಿಂದೆ ಪ್ರತಿಪಕ್ಷದಲ್ಲಿದ್ದಾಗ ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿ ಬಳ್ಳಾರಿವರೆಗೂ ಪಾದಯಾತ್ರೆ ನಡೆಸಿದ್ದೀರಿ. ಆದರೆ, ಅಕ್ರಮ ಗಣಿಗಾರಿಕೆ ನಂಟು ಹೊಂದಿರುವವರು ಸಚಿವರನ್ನು ಸಂಪುಟದಲ್ಲಿ ಮುಂದುವರಡಸಿದರೆ ನಿಮ್ಮ ಘನತೆಗೂ ಧಕ್ಕೆ ಆಗುತ್ತದೆ ಎಂದು ರಾಜ್ಯಪಾಲರು ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೆ, ರಾಜ್ಯಪಾಲರು ಸಂತೋಷ್ ಲಾಡ್ ಅವರನ್ನು ಸಂಪುಟದಿಂದ ಕೈಬಿಡುವಂತೆ ತಾಕೀತು ಮಾಡಲಿಲ್ಲ. ಈ ಬಗ್ಗೆ ನೀವೇ ಆಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ ಎಂದು ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ. ರಾಜ್ಯಪಾಲರ ಸಲಹೆ ಕೇಳಿದ ಸಿದ್ದರಾಮಯ್ಯ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಲಾಡ್ ಅವರನ್ನು ಸಮರ್ಥಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಲಾಡ್ ವಿರುದ್ಧದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಇದಕ್ಕೆ ಸಂಬಂಧಿಸಿದಂತೆ ಅಡ್ವೋಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿದ್ದೇನೆ. ಪ್ರತಿಪಕ್ಷಗಳ ಸುಮ್ಮನೆ ಆರೋಪಗಳನ್ನು ಮಾಡುತ್ತಿವೆ. ಅಗತ್ಯವಾದರೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಾನೂನು ಇಲಾಖೆ ಅಧಿಕಾರಿಗಳಿಂದಲೂ ವರದಿ ಪಡೆಯಲಾಗುವುದು ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. (ಲಾಡ್ ರಾಜೀನಾಮೆ ರಾಜಭವನದ ಅಂಗಳಕ್ಕೆ)
ಸಂತೋಷ್ ಲಾಡ್ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದು ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ನಾಯಕರು ಪ್ರತಿಭಟನೆ, ಧರಣಿ ನಡೆಸಿದ್ದರು, ರಾಜ್ಯಪಾಲರನ್ನು ಭೇಟಿಯಾಗಿ ಸಂಪುಟದಿಂದ ಲಾಡ್ ಕೈ ಬಿಡುವಂತೆ ಸಿಎಂಗೆ ಸಲಹೆ ನೀಡುವಂತೆ ಮನವಿ ಮಾಡಿದ್ದರು. ಆದ್ದರಿಂದ ಸಿಎಂ ಭೇಟಿಯ ವೇಳೆ ರಾಜ್ಯಪಾಲರು ಲಾಡ್ ವಿಚಾರ ಪ್ರಸ್ತಾಪಿಸಿದ್ದರು.












Click it and Unblock the Notifications