"ಬಿಬಿಎಂಪಿ ಸೂಪರ್ ಸೀಡ್ ನಿರ್ಧಾರವನ್ನು ವಾಪಸ್ ಪಡೆಯಲಿ"
ಬೆಂಗಳೂರು, ಏ.19: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆಯ ನೆಪದಲ್ಲಿ ಚುನಾವಣೆಗಳನ್ನು ಮುಂದೂಡಬೇಕೆಂದು ಹಠ ತೊಟ್ಟು, ಸೂಪರ್ ಸೀಡ್ ಮಾಡಿರುವ ಸಿದ್ಧರಾಮಯ್ಯನವರ ಸರ್ಕಾರದ ಕ್ರಮವನ್ನು ಲೋಕಸತ್ತಾ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ.
ವಿಜಯಭಾಸ್ಕರ್ ಅವರು ಬಿಬಿಎಂಪಿ ಮೇಯರ್ ಕಚೇರಿಗೆ ತೆರಳಿ ಶನಿವಾರ ರಾತ್ರಿಯೇ ಆಡಳಿತಾಧಿಕಾರಿಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಇದೇ ವೇಳೆ ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ ಅವರನ್ನು ಸರ್ಕಾರ ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ಐಎಎಸ್ ಅಧಿಕಾರಿ ಜಿ. ಕುಮಾರನಾಯಕ್ ಅವರನ್ನು ನೇಮಿಸಲಾಗಿದೆ. [ಬಿಬಿಎಂಪಿ ವಿಸರ್ಜನೆ ಮಾಡಿ ಸರ್ಕಾರದ ಅಧಿಸೂಚನೆ]
ಸಿದ್ಧರಾಮಯ್ಯನವರ ಸರ್ಕಾರವು ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಮತ್ತು ಯೋಜನೆಗಳನ್ನು ಹೊಂದಿಲ್ಲ. ಕೇವಲ ಚುನಾವಣೆಯನ್ನು ಮುಂದೂಡುವ ಸಲುವಾಗಿ ವಿಭಜನೆ ಮತ್ತು ಸೂಪರ್ ಸೀಡ್ ನಿರ್ಧಾರ ಮಾಡಲಾಗಿದೆ.
ಆದ್ದರಿಂದ ಲೋಕಸತ್ತಾ ಪಕ್ಷವು ಈ ಕೂಡಲೇ ಸರ್ಕಾರದ ಈ ನಿರ್ಧಾರವನ್ನು ವಾಪಸ್ ಪಡೆದು, ಕೂಡಲೇ ಪಾಲಿಕೆಯ ಚುನಾವಣೆಯನ್ನು ನಿಗದಿಯಂತೆ ನಡೆಯಲು ಅನುವು ಮಾಡಿಕೊಡಬೇಕೆಂದು ಒತ್ತಾಯು ಮಾಡುತ್ತದೆ.

ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಮತ್ತು ಆಡಳಿತದ ವಿಷಯದಲ್ಲಿ ದಿಕ್ಕು ದೆಸೆಯಿಲ್ಲದೆ ನಿರ್ಧಾರ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರವು, ತೊಘಲಕ್ ದರ್ಬಾರಿನಂತೆ ಕೆಲಸ ಮಾಡುತ್ತಿದೆ. ಕಳೆದ ಐದು ವರ್ಷಗಳಿಂದ ಪಾಲಿಕೆಯಲ್ಲಿ ಅಕ್ರಮಗಳ ಸರಮಾಲೆಯೇ ನಡೆಯುತ್ತಿದೆ.
ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರು ಕೂಡ ಯಾವುದೇ ನಿರ್ಧಾರ ಕೈಗೊಳ್ಳದೆ, ಚುನಾವಣೆ ಹತ್ತಿರ ಬರುವವರೆಗೂ ಸುಮ್ಮನಿದ್ದು, ಹತ್ತಿರ ಬಂದಾಗ ವರದಿ ತರಿಸಿಕೊಂಡು, ಈ ನಿರ್ಧಾರ ಕೈಗೊಂಡಿರುವುದು ಕಾಕತಾಳಿಯವೇನಲ್ಲ. ಪಾಲಿಕೆಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಮುಂದಿಟ್ಟುಕೊಂಡು ವಜಾ ಮಾಡುವುದಾಗಿದ್ದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳುಗಳಲ್ಲಿ ಈ ಕೆಲಸ ಮಾಡಬೇಕಾಗಿತ್ತು. [ಬಿಬಿಎಂಪಿ ವಿಭಜನೆ ಹೇಗೆ, ಇಲ್ಲಿದೆ ಮಾಹಿತಿ]
ರಾಜ್ಯ ಸರ್ಕಾರದ ಈ ನಿರ್ಧಾರದ ಹಿಂದೆ, ಆಡಳಿತ ಪಕ್ಷದ ಅನೇಕ ಶಾಸಕರು ಮತ್ತು ಪಾಲಿಕೆ ಸದಸ್ಯರು ಭಾಗಿಯಾಗಿರುವ ಸಹಸ್ರಾರು ಕೋಟಿ ಅಕ್ರಮಗಳನ್ನು ಮುಚ್ಚಿ ಹಾಕುವ ತಂತ್ರವಾಗಿ ಪಾಲಿಕೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ಅಕ್ರಮಗಳ ತನಿಕೆಯನ್ನು ನಡೆಸುತ್ತಿರುವ ತನಿಖಾಧಿಕಾರಿಗಳನ್ನು ಏಕಾಏಕಿ ವರ್ಗಾವಣೆ ಮಾಡಿರುವುದು, ಸಿಐಡಿ ತನಿಖೆಯ ವರದಿಗಳನ್ನು ರಹಸ್ಯವಾಗಿಟ್ಟಿರುವುದು ಈ ಸಂಚಿನ ಭಾಗವಾಗಿರುತ್ತದೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‍ಗಳು ಕೂಡ ಇದರಲ್ಲಿ ಭಾಗಿಯಾಗಿರುವ ಸಂದೇಹವಿದೆ. ಬಿಬಿಎಂಪಿಯ ಆಡಳಿತ ನಡೆಸಿದ ಬಿಜೆಪಿ ಐದು ವರ್ಷಗಳ ದುರಾಡಳಿತದ ಮೂಲಕ ಬೆಂಗಳೂರನ್ನು ಗಾರ್ಬೇಜ್ ನಗರವನ್ನಾಗಿಸಿದ ಖ್ಯಾತಿ ಪಡೆದಿದೆ. ತನ್ನ ಸದಸ್ಯರುಗಳು ಮತ್ತು ಶಾಸಕರುಗಳು ನಡೆಸಿರುವ ಅನೇಕ ಅಕ್ರಮಗಳನ್ನು ಮುಚ್ಚಿ ಹಾಕುಲು ಅದಕ್ಕೆ ಕಾಂಗ್ರೆಸ್ ಸರ್ಕಾರದ ನೆರವು ಬೇಕಾಗಿದೆ. ಆದ್ದರಿಂದ ಅವುಗಳು ಕೂಡ ಈ ನಾಟಕದ ಭಾಗವಾಗಿದ್ದಾರೆ.
ಈ ಎಲ್ಲಾ ಅಂಶಗಳನ್ನು ಸರ್ಕಾರ ಪರಿಗಣಿಸಿ, ಪಾಲಿಕೆಯಲ್ಲಿ ಆಗಿರುವ ಅವ್ಯವಹಾರಗಳ ತನಿಖೆಯನ್ನು ಸುಪ್ರೀಂಕೋರ್ಟಿನ ಹಾಲಿ ನ್ಯಾಯಾಧೀಶರೊಬ್ಬರ ಉಸ್ತುವಾರಿಯಲ್ಲಿ ಸಿಐಡಿ ಅಥವಾ ಸಿಬಿಐ ತನಿಖೆ ಮಾಡಿಸಬೇಕು ಮತ್ತು ಪಾಲಿಕೆಯ ಚುನಾವಣೆಗಳನ್ನು ತಕ್ಷಣವೇ ನಡೆಸಲು ಅನುವಾಗುವಂತೆ ಪಾಲಿಕೆಯನ್ನು ವಜಾ ಆದೇಶವನ್ನು ಹಿಂಪಡೆಯಬೇಕೆಂದು ಲೋಕಸತ್ತಾ ಪಕ್ಷ ಒತ್ತಾಯಿಸುತ್ತದೆ.












Click it and Unblock the Notifications