ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ವಿಭಜನೆ ಹೇಗೆ?, ಸಂಕ್ಷಿಪ್ತ ಮಾಹಿತಿ

|
Google Oneindia Kannada News

ಬೆಂಗಳೂರು, ಮಾ. 20 : ಕರ್ನಾಟಕ ಸರ್ಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಮೂರು ಭಾಗಗಳಾಗಿ ವಿಂಗಡನೆ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಸುಗಮ ಆಡಳಿತದ ದೃಷ್ಟಿಯಿಂದ ಪಾಲಿಕೆಯನ್ನು ವಿಭಜಿಸುವ ಪ್ರಸ್ತಾವನೆಯನ್ನು ಕಾಂಗ್ರೆಸ್ 2013ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿಯೇ ಪ್ರಕಟಿಸಿತ್ತು.

198 ವಾರ್ಡ್‌ಗಳನ್ನು ಹೊಂದಿರುವ ಬಿಬಿಎಂಪಿಯನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ಎಂದು ಮೂರು ಪಾಲಿಕೆಗಳಾಗಿ ವಿಭಜಿಸಲಾಗುತ್ತದೆ. ಹಲವಾರು ತಿಂಗಳುಗಳ ಚರ್ಚೆಯ ಬಳಿಕ ಬಿಬಿಎಂಪಿಯನ್ನು ವಿಭಜನೆ ಮಾಡುವ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿದೆ. [ಬಿಬಿಎಂಪಿ ವಿಭಜನೆಗೆ ಸರ್ಕಾರದ ಒಪ್ಪಿಗೆ]

ಸಮಿತಿ ರಚನೆ ಮಾಡಿತ್ತು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆ ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದರು. ನಂತರ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ್ ಅವರ ಅಧ್ಯಕ್ಷತೆಯ ಮೂವರು ಸದಸ್ಯರ ಸಮಿತಿ ರಚನೆ ಮಾಡಿ ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. [ಬಿಬಿಎಂಪಿ ವಿಭಜನೆ ಅನಿವಾರ್ಯ]

bbmp

ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿರುವ ಸಮಿತಿ ಅಂತಿಮ ವರದಿ ನೀಡಲು ಆರು ತಿಂಗಳ ಕಾಲಾವಕಾಶ ಕೋರಿದೆ. ಮೂವರು ಸದಸ್ಯರ ಸಮಿತಿಯಲ್ಲಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್, ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ ಹಾಗೂ ಹಿಂದಿನ ಬೆಂಗಳೂರು ಅಜೆಂಡಾ ಟಾಸ್ಕ್ ಪೋರ್ಸ್‌ನ ಸದಸ್ಯ ರವಿಚಂದರ್ ಇದ್ದಾರೆ. [ಬಿಬಿಎಂಪಿ ವಿಭಜನೆಯ ಸುಳಿವು ಕೊಟ್ಟ ಸಿದ್ದರಾಮಯ್ಯ?]

ಬೆಳೆದ ಮಹಾನಗರ ಪಾಲಿಕೆ : 2007ರಲ್ಲಿ 7 ನಗರಸಭೆ, 1 ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ರಚನೆ ಮಾಡಲಾಯಿತು. ಇದರಿಂದ 240 ಚ.ಕಿ.ಮೀ. ವ್ಯಾಪ್ತಿಯಿದ್ದ ನಗರ 800 ಚ.ಕಿ.ಮೀ.ಗೆ ವಿಸ್ತರಣೆಯಾಯಿತು. ಈಗ 198 ವಾರ್ಡ್‌ನ ಪಾಲಿಕೆಯನ್ನು ಮೂರು ಭಾಗವಾಗಿ ಮಾಡಲಾಗುತ್ತದೆ.

ಎಲ್ಲಿ ಯಾವ ಕಚೇರಿ : ಪಾಲಿಕೆ ಮೂರು ವಿಭಜನೆ ಆದ ಬಳಿಕ ಬಿಬಿಎಂಪಿ ಪ್ರಧಾನ ಕಚೇರಿ ಬೆಂಗಳೂರು ಕೇಂದ್ರ ಮಹಾನಗರ ಪಾಲಿಕೆಗೆ ಸೇರಲಿದ್ದು, ಬೆಂಗಳೂರು ಪೂರ್ವ ಮಹಾನಗರ ಪಾಲಿಕೆ ಕಚೇರಿ ಎಂ.ಜಿ.ರಸ್ತೆಯ ಮೇಯೊಹಾಲ್‌ನ ಹಳೇ ಪಾಲಿಕೆ ಕಟ್ಟಡದಲ್ಲಿರುತ್ತದೆ. ಬೆಂಗಳೂರು ಪಶ್ಚಿಮ ಮಹಾನಗರ ಪಾಲಿಕೆ ಕಚೇರಿ ವಿಜಯನಗರ ಅಥವಾ ಬ್ಯಾಟರಾಯನಪುರದಲ್ಲಿ ಸ್ಥಾಪನೆಯಾಗಲಿದೆ.

ಕಾಂಗ್ರೆಸ್ ಪ್ರಣಾಳಿಯ ಅಂಶ : 2013ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಬಿಬಿಎಂಪಿ ವಿಭಜನೆ ಮಾಡುವ ಅಂಶವನ್ನು ಪ್ರಕಟಿಸಿತ್ತು. ನಂತರ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿಭಜನೆಗೆ ಬಗ್ಗೆ ಚರ್ಚೆ ಆರಂಭವಾಯಿತು.

28 ವಿಧಾನಸಭಾ ಕ್ಷೇತ್ರಗಳೂ ಹಂಚಿಕೆ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೂರು ಭಾಗಗಳಾಗಿ ವಿಂಗಡನೆಯಾದರೆ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳು ಹಂಚಿ ಹೋಗಲಿವೆ. ಪದ್ಮನಾಭನಗರ, ಹೆಬ್ಬಾಳ, ಪುಲಕೇಶಿನಗರ, ಚಿಕ್ಕಪೇಟೆ, ಸರ್ವಜ್ಞನಗರ, ಬಸವನಗುಡಿ, ಜಯನಗರ, ಶಿವಾಜಿನಗರ, ಗಾಂಧಿನಗರ, ಮಲ್ಲೇಶ್ವರ, ಚಾಮರಾಜಪೇಟೆ, ಬೆಂಗಳೂರು ದಕ್ಷಿಣ, ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರಗಳು ಬೆಂಗಳೂರು ಕೇಂದ್ರದ ವ್ಯಾಪ್ತಿಗೆ ಸೇರಲಿವೆ.

ಬೆಂಗಳೂರು ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ಬೊಮ್ಮನಹಳ್ಳಿ, ಸಿ.ವಿ.ರಾಮನ್‌ ನಗರ, ಶಾಂತಿನಗರ, ಬಿ.ಟಿ.ಎಂ ಲೇಔಟ್‌, ಕೆ.ಆರ್‌.ಪುರ, ಮಹದೇವಪುರ ಕ್ಷೇತ್ರಗಳು ಸೇರಲಿವೆ. ಬೆಂಗಳೂರು ಪಶ್ಚಿಮ ಕ್ಷೇತ್ರದ ವ್ಯಾಪ್ತಿಗೆ ವಿಜಯನಗರ, ಗೋವಿಂದರಾಜನಗರ, ರಾಜಾಜಿನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ ಕ್ಷೇತ್ರ ಸೇರುತ್ತವೆ.

ಪಾಲಿಕೆ ಬಗ್ಗೆ ಒಂದಷ್ಟು : 1949 ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಯಿತು. ನಂತರ ವಾರ್ಡ್‌ಗಳ ಸಂಖ್ಯೆ 55ಕ್ಕೆ ಏರಿಕೆಯಾಯಿತು. ನಗರ ಬೆಳೆದಂತೆ ಜನಸಂಖ್ಯೆ ಮತ್ತು ವಾರ್ಡ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. 2007ರಲ್ಲಿ ಏಳು ನಗರಸಭೆ, ಒಂದು ಪುರಸಭೆ ಹಾಗೂ 110 ಹಳ್ಳಿಗಳನ್ನು ಸೇರಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚಿಸಲಾಯಿತು.

English summary
Karnataka Government decided to split the Bruhat Bengaluru Mahanagara Palike (BBMP) into 3 corporations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X