ಐಟಿಯವರ ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆ: ಸಿದ್ದರಾಮಯ್ಯ
ಬೆಂಗಳೂರು, ಅಕ್ಟೋಬರ್ 12: ಮಾಜಿ ಗೃಹ ಸಚಿವ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆಗೆ ಆದಾಯ ತೆರಿಗೆ ಇಲಾಖೆಯವರ ಕಿರುಕುಳವೇ ಕಾರಣ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ವಿಧಾನಸಭೆಯಲ್ಲಿ ಶನಿವಾರ ಮಾತನಾಡಿದ ಅವರು, ಆದಾಯ ತೆರಿಗೆ ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಐಟಿಯವರು ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ರಮೇಶ್ ತಮ್ಮ ಗೆಳೆಯರ ಬಳಿ ಹೇಳಿಕೊಂಡಿದ್ದರು ಎಂದು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಇದರ ಅರ್ಥ ಅವರು ಆದಾಯ ತೆರಿಗೆಯವರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಎಂದು ಸಿದ್ದರಾಮಯ್ಯ ಹೇಳಿದರು.

ಆದಾಯ ತೆರಿಗೆ ಇಲಾಖೆಯವರು ದಾಳಿಗಳನ್ನು ನಡೆಸುವುದು ತಪ್ಪಲ್ಲ. ಆದರೆ ಕಾಂಗ್ರೆಸ್‌ನವರನ್ನೇ ಗುರಿಯನ್ನಾಗಿರಿಸಿಕೊಂಡು ಏಕೆ ದಾಳಿಗಳನ್ನು ನಡೆಸುತ್ತಿದ್ದಾರೆ? ರಾಜಕೀಯ ದ್ವೇಷದಲ್ಲಿ ಐಟಿ ದಾಳಿ ಸರಿಯಲ್ಲ. ಹಾಗೆ ದಾಳಿ ಮಾಡುವುದಾದರೆ ಎಲ್ಲ ಪಕ್ಷದವರ ಮೇಲೂ ಮಾಡಲಿ ಎಂದು ಹೇಳಿದರು.
ಬಿಜೆಪಿಯಲ್ಲಿ ದುಡ್ಡು ಇರುವವರು ಇಲ್ಲವಾ? ಅವರು ವೈದ್ಯಕೀಯ ಕಾಲೇಜುಗಳನ್ನು, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿಲ್ಲವಾ? ಅವರ ಮೇಲೆಯೂ ಐಟಿ ದಾಳಿ ನಡೆಸಲಿ. ನನ್ನದೇನೂ ತಕರಾರಿಲ್ಲ ಎಂದರು.












Click it and Unblock the Notifications