ಬೆಂಗಳೂರಿನ ಆಸ್ತಿದಾರರಿಗೆ ಶಾಕ್: ಈ ಕಟ್ಟಡಗಳನ್ನು ಸೀಲಿಂಗ್ ಮಾಡುವ ಎಚ್ಚರಿಕೆ ಕೊಟ್ಟ ಜಿಬಿಎ
ಬೆಂಗಳೂರು: ಬೆಂಗಳೂರಿನ ಕೆಲವೊಂದು ನಿರ್ದಿಷ್ಟ ಆಸ್ತಿಗಳಿಗೆ ಶಾಕ್ ಕೊಡುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.
ಬೆಂಗಳೂರಿನಲ್ಲಿ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಬಳಕೆ ಕಟ್ಟಡಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ ನೀಡುವುದಾಗಿ ಹೇಳಲಾಗಿದೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಆಯುಕ್ತರಾದ ಡಿ.ಎಸ್.ರಮೇಶ್ ಅವರ ಮಾರ್ಗದರ್ಶನದಂತೆ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಸುಸ್ಥಿದಾರರಾಗಿರುವ ವಸತಿಯೇತರ ಬಳಕೆಯ ಬ್ಯಾಂಕ್, ಹೋಟೆಲ್, ವಾಣಿಜ್ಯ ಸಂಕೀರ್ಣ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ಬಾಕಿದಾರರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ. ಇದು ಬೆಂಗಳೂರಿನ ಇನ್ನುಳಿದ ಪಾಲಿಕೆಗಳ ವ್ಯಾಪ್ತಿಯಲ್ಲೂ ಪ್ರಾರಂಭವಾಗುವ ಸಾಧ್ಯತೆ ಇದೆ.

ಆಸ್ತಿ ತೆರಿಗೆ ವಸೂಲಾತಿಗೆ ಸೀಲಿಂಗ್
ಬೆಂಗಳೂರು ನಗರದಲ್ಲಿ ಒಂದು ಮತ್ತು ಅದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳಿಗೆ ನಿಯಮಾನುಸಾರ ಈಗಾಗಲೇ ನೋಟಿಸ್ ನೀಡಿ ಸಾಕಷ್ಟು ಸಮಯಾವಕಾಶ ನೀಡಿದ್ದರೂ, ಆಸ್ತಿ ತೆರಿಗೆ ಪಾವತಿಸಿರುವುದಿಲ್ಲ.
ಅಂತಹ ಈ ಮಾದರಿಯ ಸ್ವತ್ತುಗಳನ್ನು ವಲಯ ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ.ಕೆ. ಅವರ ನೇತೃತ್ವದಲ್ಲಿ ತಂಡ ರಚಿಸಿ ಉಪ ವಿಭಾಗವಾರು ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸ್ವತ್ತುಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆ ನೀಡಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.
ಇನ್ನು ಅತಿ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡಿರುವ ವಾಣಿಜ್ಯ ಕಟ್ಟಡಗಳ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದ್ದು, ಸಾರ್ವಜನಿಕರು ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸುವಂತೆ ಈ ಮೂಲಕ ಮನವಿ ಮಾಡಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿ ಪರಿಶೀಲನಾ ಸಭೆ
ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುರಕ್ಷಾ-75 ಯೋಜನೆಯಡಿ ಪ್ರಮುಖ ಜಂಕ್ಷನ್ ಅಭಿವೃದ್ಧಿ ಕುರಿತು ಪರಿಶೀಲನಾ ಸಭೆಯನ್ನು ಸೋಮವಾರ ನಡೆಸಲಾಗಿದೆ. ಸಭೆಯಲ್ಲಿ ಮಾರತ್ತಹಳ್ಳಿ, ವರ್ತೂರು ಕೋಡಿ, ಬಾಗ್ಮನೆ ಟೆಕ್ ಪಾರ್ಕ್, ಕುಂದಲಹಳ್ಳಿ, ಹೊರ ವರ್ತುಲ ರಸ್ತೆ-ಎಂಬಸಿ ಟೆಕ್ ವಿಲೇಜ್ ಹಾಗೂ ಸರ್ಜಾಪುರ ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿ ಹಾಗೂ ಕಾಮಗಾರಿ ವೇಗ ನೀಡಲು ಸೂಚಿಸಲಾಗಿದೆ.
ಅಲ್ಲದೇ ಹೊರ ವರ್ತುಲ ರಸ್ತೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಸಮಗ್ರ ಅಭಿವೃದ್ಧಿ ಪಡಿಸಿ ಸಂಚಾರ ದಟ್ಟಣೆ ನಿವಾರಣೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊರ ವರ್ತುಲ ರಸ್ತೆಯಲ್ಲಿರು ಫ್ಲೈಓವರ್ ಮತ್ತು ಅಂಡರ್‌ಪಾಸ್ ಸಮೀಪದ ಪಾದಚಾರಿ ಮಾರ್ಗದ ಅತಿಕ್ರಮಣವನ್ನು ತೆರವುಗೊಳಿಸಲು ಮೈಕ್ರೋಪ್ಲಾನ್ ಸಿದ್ದತೆ ಮಾಡಿಕೊಂಡು ಕ್ರಮವಹಿಸಲು ಹಾಗೂ ಪರಿತ್ಯಾಜನ ಪತ್ರ (ಆರ್.ಡಿ) ಆಗಿರುವ ಸ್ವತ್ತುಗಳ ಅತಿಕ್ರಮಣ ತೆರವುಗೊಳಿಸಿ ಕೂಡಲೇ ನಗರ ಪಾಲಿಕೆ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಪ್ರಮುಖ ಪ್ರದೇಶಗಳ ಪಿ.ಜಿ ತಪಾಸಣೆ
ಕಾಡುಗೋಡಿಯ ವ್ಯಾಪ್ತಿಯಲ್ಲಿರುವ ವೈಟ್ ರೋಸ್ ಲೇಔಟ್, ಎ.ಎಲ್ ಕೋ ಲಿವಿಂಗ್ ಪಿ.ಜಿಯಲ್ಲಿ ಅಪರ ಆಯುಕ್ತರು (ಕಂದಾಯ) ಪ್ರಜ್ಞಾ ಅಮ್ಮೆಂಬಳ ಅವರು ತಪಾಸಣೆ ನಡೆಸಿದರು. ತಪಾಸಣೆ ವೇಳೆಯಲ್ಲಿ ಉದ್ದಿಮೆ ಪರವಾನಗಿ ನವೀಕರಣ ಮಾಡದೇ ಪಿ.ಜಿ ಕಾರ್ಯಾಚರಣೆ ನಡೆಸುತ್ತಿರುವುದು ಕಂಡುಬಂದಿದ್ದು, ಪಿ.ಜಿ. ಉಪಹಾರ ಗೃಹದಲ್ಲಿ ಸ್ವಚ್ಚತೆ ಕಾಪಾಡದೇ ಇರುವುದರಿಂದ ನಿಯಮಾನುಸಾರ ₹50,000 ದಂಡ ವಿಧಿಸಲಾಯಿತು ಎಂದು ಅಪರ ಆಯುಕ್ತರು ತಿಳಿಸಿದರು. ಈ ತಪಾಸಣೆಯಲ್ಲಿ ವೈದ್ಯಾಧಿಕಾರಿ ಹಾಗೂ ಆರೋಗ್ಯ ಮೇಲ್ವಿಚಾರಕರು ಹಾಜರಿದ್ದರು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications