ಶಿವರಾಮ ಕಾರಂತ ಬಡಾವಣೆ ನಿರ್ಮಾಣ; ವಿವರ ಕೇಳಿದ ಕೋರ್ಟ್
ಬೆಂಗಳೂರು, ಜನವರಿ 30: ಬೆಂಗಳೂರು ನಗರದ ಬಹುನಿರೀಕ್ಷಿತ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಮೇಲೆ ನಿಗಾ ವಹಿಸಲು ತೀರ್ಮಾನಿಸಿರುವ ಕರ್ನಾಟಕ ಹೈಕೋರ್ಟ್ ಇದೀಗ ಬಡಾವಣೆಯ ವಿವರಗಳನ್ನು ಒದಗಿಸುವಂತೆ ಬಿಡಿಎಗೆ ಆದೇಶಿಸಿದೆ.
ಅಲ್ಲದೆ, ಶ್ರೀಸಾಮಾನ್ಯರು ತಮ್ಮ ಜೀವಮಾನದಲ್ಲೊಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎಂದು ಕಾಣುವ ಕನಸು ಸಾಕಾರವಾಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ ಬಡಾವಣೆಯ ಸಮಗ್ರ ವಿವರ ನೀಡಿ ಎಂದು ಹೈಕೋರ್ಟ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೂಚಿಸಿದೆ.

ಸುಪ್ರೀಂಕೋರ್ಟ್ ನಿರ್ದೇಶನದ ಅನುಸಾರ ರೂಪುಗೊಂಡಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ವಿಶೇಷ ನ್ಯಾಯಪೀಠ ಈ ಕುರಿತ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿತು. ಬಿಡಿಎ ಪರ ಸುದೀರ್ಘ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ ಬಡಾವಣೆ ಅಭಿವೃದ್ಧಿ ದಿಸೆಯಲ್ಲಿ ಎದುರಾಗಿರುವ ಎಡರು ತೊಡರುಗಳು ಮತ್ತು ಇದರ ಪರಿಹಾರಾರ್ಥವಾಗಿ ಬಿಡಿಎ ಕೈಗೊಂಡಿರುವ ಕ್ರಮಗಳನ್ನು ನ್ಯಾಯಪೀಠಕ್ಕೆ ವಿವರಿಸಿದರು.
ಹಾಲಿ ಕಟ್ಟಡಗಳಿಗೆ ಅನ್ವಯವಿಲ್ಲ: ವಿಚಾರಣೆ ಆಲಿಸಿದ ನ್ಯಾಯಪೀಠ, ಆವಲಹಳ್ಳಿ ವ್ಯಾಪ್ತಿಯಲ್ಲಿನ ವಿವಿಧ ಸರ್ವೇ ನಂಬರ್‌ಗಳಲ್ಲಿರುವ ಒಟ್ಟು 29 ಗುಂಟೆಗೂ ಹೆಚ್ಚಿನ ಜಮೀನನಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ರಚನೆಗಳಿಗೆ ಅಧಿಸೂಚನೆ ಅನ್ವಯ ಸ್ವಾಧೀನ ಪ್ರಕ್ರಿಯೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿತು.
ಇದೇ ವೇಳೆ ಬಡಾವಣೆ ನಿರ್ಮಾಣ ಕುರಿತ ದೂರುಗಳನ್ನು ಪರಿಹರಿಸಲು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ತ್ರಿಸದಸ್ಯ ಸಮಿತಿ ರದ್ದುಪಡಿಸಿ ಎಲ್ಲ ಅಹವಾಲುಗಳನ್ನು ತಾನೇ ವಿಚಾರಣೆ ನಡೆಸುವುದಾಗಿ ನ್ಯಾಯಪೀಠ ಸ್ಪಷ್ಟಪಡಿಸಿತು.
ಸಮಿತಿಯ ವಶದಲ್ಲಿದ್ದ ಸಂಪುಟಗಟ್ಟಲೆ ದಾಖಲೆಗಳನ್ನು ಗಣಕೀಕೃತಗೊಳಿಸಿ ಅವುಗಳನ್ನು ಹೈಕೋರ್ಟ್ ಕಂಪ್ಯೂಟರ್ ವಿಭಾಗಕ್ಕೆ ವರ್ಗಾಯಿಸುವ ಕುರಿತಂತೆ ಕ್ರಮ ಕೈಗೊಳ್ಳುವಂತೆ ನ್ಯಾಯಾಂಗ ರಿಜಿಸ್ಟ್ರಾರ್ ಅವರಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿತು.
ಕಳೆದ ವಿಚಾರಣೆ ವೇಳೆಯಲ್ಲಿ, ಸಮಿತಿಗಾಗಿ ಈವರೆಗೆ 18 ಕೋಟಿ ರೂ. ವ್ಯಯ ಮಾಡಲಾಗಿದೆ. ಸಮಿತಿಗೆ ಮಾಡಲಾಗಿರುವ ಈ ವೆಚ್ಚ ಸಾರ್ವಜನಿಕ ಹಣವಾಗಿದೆ. ಹೀಗಾಗಿ, ಸಮಿತಿ ಅಧ್ಯಕ್ಷರೇ ಹೇಳಿರುವಂತೆ ಸಮಿತಿಯನ್ನು ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದನ್ನು ನ್ಯಾಯಪೀಠವು ಪುನರುಚ್ಚರಿಸಿತು.
ಪ್ರಕರಣದ ಹಿನ್ನೆಲೆ: ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಂತೆ 2,700 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬಿಡಿಎ ನಿರ್ಮಿಸುತ್ತಿರುವ ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ನಿಟ್ಟಿನಲ್ಲಿ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಈ ಕುರಿತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಎಲ್ಲ ಹಂತದಲ್ಲಿನ ನ್ಯಾಯಾಲಯಗಳು ಸರ್ಕಾರದ ಭೂ ಸ್ವಾಧೀನ ಪ್ರಕ್ರಿಯೆ ಕ್ರಮವನ್ನು ಎತ್ತಿ ಹಿಡಿದಿದ್ದವು.
ಆದರೆ, ಬಡಾವಣೆ ಅಧಿಸೂಚನೆ ಪ್ರಕಟವಾಗುವುದಕ್ಕೂ ಮುನ್ನ ಆ ಪ್ರದೇಶದಲ್ಲಿನ ಜಮೀನು ಮಾಲೀಕರು ಅಭಿವೃದ್ಧಿ ಪಡಿಸಿದ್ದ ಲೇಔಟ್‌ಗಳು ಮತ್ತು ಉದ್ದೇಶಿತ ಬಡಾವಣೆ ವ್ಯಾಪ್ತಿಯಲ್ಲಿನ ಕಂದಾಯ ನಿವೇಶನಗಳು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿಕೊಂಡ ಮನೆಗಳ ಸಕ್ರಮೀಕರಣ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಗಳ ಆಧಾರದಲ್ಲಿ ಸುಪ್ರೀಂಕೋರ್ಟ್ 2020 ಡಿಸೆಂಬರ್ 3ರಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿ ರಚಿಸಿತ್ತು. ಈ ಸಮಿತಿಯು ನ್ಯಾಯಾಲಯದ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಸೂಚಿಸಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿತ್ತು. ಸಮಿತಿಯ ಅವಧಿ 2023ರ ಡಿಸೆಂಬರ್ 31ಕ್ಕೆ ಮುಕ್ತಾಯವಾಗಿತ್ತು.
ಇದೇ ವೇಳೆ ಸಮಿತಿಯ ಅಧ್ಯಕ್ಷರು, ಸಮಿತಿಗೆ ವಹಿಸಲಾಗಿದ್ದ ಕೆಲಸ ಪೂರ್ಣಗೊಂಡಿರುವ ಕಾರಣ ಸಮಿತಿಯನ್ನು ವಿಸರ್ಜಿಸಬಹುದು ಎಂದು ತಿಳಿಸಿದ್ದರು. ಆದರೆ, ಸಮಿತಿಯ ಇತರೆ ಸದಸ್ಯರು, ಬಡಾವಣೆ ನಿರ್ಮಾಣ ಸಂಬಂಧ ಇನ್ನೂ ಇರುವ ಹಲವು ದೂರುಗಳನ್ನು ಪರಿಹರಿಸಲು ಸಮಿತಿಯ ಅಧಿಕಾರಾವಧಿಯನ್ನು ಪುನಃ ಆರು ತಿಂಗಳು ವಿಸ್ತರಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.












Click it and Unblock the Notifications