ಒಂದೇ ಟೇಕ್ ನಲ್ಲಿ ಆರ್ಟಿಸ್ಟ್ ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ: ಮುನಿರತ್ನ ವ್ಯಂಗ್ಯ
ಬೆಂಗಳೂರು, ನ 4: ರಾಜರಾಜೇಶ್ವರಿ ನಗರ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಗೆ ಎಚ್.ಕುಸುಮಾ ಅವರ ಹೆಸರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಳಿಬರುತ್ತಿದ್ದ ವೇಳೆ, ಡಿ.ಕೆ.ರವಿ ಅವರ ತಾಯಿ ಗೌರಮ್ಮ, ಕುಸುಮಾ ವಿರುದ್ದ ಕಿಡಿಕಾರಿದ್ದರು. ಚುನಾವಣೆಯ ಒಂದೆರಡು ದಿನ ಇರಬೇಕು ಎನ್ನುವ ಹೊತ್ತಿನಲ್ಲಿ ಉಲ್ಟಾ ಹೊಡೆದು ಸೊಸೆಯ ಪರವಾಗಿ ಮಾತನಾಡಿದ್ದರು.
ಈ ಬಗ್ಗೆ ಚುನಾವಣೆ ಮುಗಿದ ನಂತರ ಪ್ರತಿಕ್ರಿಯೆ ನೀಡಿರುವ ಮುನಿರತ್ನ, "ಹತ್ತು ದಿನದ ಹಿಂದೆ ಜಗುಲಿಯ ಮೇಲೆ ಕೂತು ಏನೋ ಮಾತಾಡಿದ್ದರು. ಈಗ ಲಕ್ಷಾಂತರ ರೂಪಾಯಿಯ ಸೋಫಾದ ಮೇಲೆ ಕೂತು ಮಾತನಾಡುತ್ತಿದ್ದಾರೆ"ಎಂದು ಹೇಳಿದ್ದಾರೆ.
"ಅವರು ಎಷ್ಟು ಚೆನ್ನಾಗಿ ಒಂದೇ ಟೇಕ್ ನಲ್ಲಿ ಮಾತನಾಡಿ ಮುಗಿಸಿದ್ದಾರೆ. ನಮ್ಮ ಕಲಾವಿದರಿದ್ದಾರೆ, ಹತ್ತತ್ತು ಟೇಕ್ ತೆಗೆದುಕೊಳ್ಳುತ್ತಾರೆ"ಎಂದು ವ್ಯಂಗ್ಯವಾಡಿರುವ ಮುನಿರತ್ನ, "ಕಡಿಮೆ ಮತದಾನವಾದರೆ ಯಾವ ಪಕ್ಷಕ್ಕೆ ಲಾಭ ಎನ್ನುವ ಲೆಕ್ಕಾಚಾರವೆಲ್ಲಾ ಈಗಿಲ್ಲ"ಎಂದಿದ್ದಾರೆ.

"ಯಡಿಯೂರಪ್ಪನವರು ಅವರ ಅನುಭವದ ಆಧಾರದ ಮೇಲೆ ನಾನು ಭರ್ಜರಿ ಜಯ ಸಾಧಿಸುತ್ತೇನೆ ಎಂದಿದ್ದಾರೆ. ಮತದಾರರಲ್ಲಿ ನಾನು ಮತವನ್ನು ಕೇಳಲಿಲ್ಲ, ಭಿಕ್ಷೆ ಕೇಳಿದ್ದೇನೆ. ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತೇನೆ ಎನ್ನುವುದನ್ನು ಈಗ ಹೇಳುವುದಿಲ್ಲ"ಎಂದು ಮುನಿರತ್ನ ವಿಶ್ವಾಸದ ಮಾತನ್ನಾಡಿದ್ದಾರೆ.
"ಯಡಿಯೂರಪ್ಪನವರು ಕೊಟ್ಟ ಮಾತಿಗೆ ತಪ್ಪುವವರಲ್ಲ. ಈಗಾಗಲೇ ಎಲ್ಲರನ್ನೂ ಮಂತ್ರಿಯನ್ನಾಗಿ ಮಾಡಿದ್ದಾರೆ. ನನಗೂ ಮಾತು ಕೊಟ್ಟಿದ್ದಾರೆ. ನಾನು ಸಚಿವನಾಗುತ್ತೇನೆ ಎಂದು ಈಗಲೇ ಹೇಳಲು ಹೇಗೆ ಸಾಧ್ಯ"ಎಂದು ಮುನಿರತ್ನ ಪ್ರಶ್ನಿಸಿದ್ದಾರೆ.
"ನಾಲ್ಕು ದಿನಗಳಾಗಲಿ, ನಾಲ್ಕು ವರ್ಷಗಳಾಗಲಿ ನನ್ನ ಜೊತೆಯಲ್ಲಿ ನನ್ನ ಮಗಳ ತರ, ನನ್ನ ಸೊಸೆ ತರ ಎರಡು ದಿನ ಬಾಳಿದ್ದೇವೆ. ನಾನು ಹಿಂದೆ ಮಾತನಾಡಿದ್ದೂ ನಿಜ, ಆದರೆ ಕಳೆದ ಒಂದು ವಾರದಿಂದ ಈಚೆಗೆ ಅವಳು ಕಣ್ಣಲ್ಲಿ ನೀರು ಹಾಕೋದನ್ನು ನೋಡಿ ಸಂಟಕ ಆಯ್ತು. ಆ ಸಂಕಟದಿಂದಲೇ ನಾನು ಇವತ್ತು ನಿಮ್ಮೆದುರು ಮಾತನಾಡುತ್ತಿದ್ದೇನೆ" ಎಂದು ಗೌರಮ್ಮ ಹೇಳಿದ್ದರು.












Click it and Unblock the Notifications