Rain deficit in Bengaluru: ಬೆಂಗಳೂರಿನಲ್ಲಿ ತೀವ್ರ ಮಳೆ ಕೊರತೆ- ಏರಿದ ತಾಪಮಾನ, ಮಾಹಿತಿ, ವಿವರ
ಬೆಂಗಳೂರು, ಆಗಸ್ಟ್ 17: ಬೆಂಗಳೂರು ಮಹಾನಗರದಲ್ಲಿ ತೀವ್ರ ಮಳೆ ಕೊರತೆಯಾಗಿದೆ. ಈ ಕಾರಣ, ತಾಪಮಾನದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಇದು ಸಾಮಾನ್ಯಕ್ಕಿಂತ 3.7 ಡಿಗ್ರಿ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಬುಧವಾರ ಗರಿಷ್ಠ ತಾಪಮಾನವು 31.8 ಡಿಗ್ರಿ ಸೆಲ್ಸಿಯಸ್ ಅನ್ನು ದಾಖಲಿಸಿದೆ. ಬೆಂಗಳೂರಿನಲ್ಲಿ ಈ ಹಿಂದೆ 1899 ರಲ್ಲಿ, ಆಗಸ್ಟ್ ತಿಂಗಳು 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇದು ಆಗಸ್ಟ್ ತಿಂಗಳ ದಾಖಲೆಯಲ್ಲಿಯೇ ಗರಿಷ್ಠವಾಗಿತ್ತು ಎಂದು ವರದಿಯೊಂದು ತಿಳಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ( ಕೆಎಸ್‌ಎನ್‌ಡಿಎಂಸಿ ) ನೀಡಿರುವ ಮಾಹಿತಿ ಪ್ರಕಾರ, ರಾಜ್ಯಾದ್ಯಂತ ಸರಾಸರಿ ಗರಿಷ್ಠ ತಾಪಮಾನವು ಯಾದಗಿರಿ ಜಿಲ್ಲೆಯಲ್ಲಿ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿಸಿದೆ.
ರಾಜ್ಯದ ಭೌಗೋಳಿಕ ಪ್ರದೇಶದ ಸುಮಾರು ಶೇ 85 ರಷ್ಟು ಗರಿಷ್ಠ ತಾಪಮಾನವು 30 ರಿಂದ 36 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ. ಕಲಬುರಗಿ, ಕೋಲಾರ, ಬೆಳಗಾವಿ, ಕೊಪ್ಪಳ, ಯಾದಗಿರಿ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ಕೆಲವೆಡೆ 35 ರಿಂದ 37 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ಕೇಂದ್ರ ತಿಳಿಸಿದೆ.
ಕೆಎಸ್‌ಎನ್‌ಡಿಎಂಸಿ ಜೂನ್ 1 ರಿಂದ ಆಗಸ್ಟ್ 16 ರ ವರೆಗಿನ ಅಂಕಿಅಂಶಗಳನ್ನು ವಿಶ್ಲೇಷಿಸಿದೆ. ದಕ್ಷಿಣ ಕರ್ನಾಟಕದ 14 ಜಿಲ್ಲೆಗಳಲ್ಲಿ ಶೇ.20 ರಿಂದ 44 ರಷ್ಟು ಮಳೆ ಕೊರತೆಯಾಗಿದೆ. ಅಂದರೆ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಹಾವೇರಿ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ರಾಮನಗರ, ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ.
ಆಗಸ್ಟ್ 1 ರಿಂದ ಆಗಸ್ಟ್ 16 ರ ವರೆಗಿನ ವಿಶ್ಲೇಷಣೆ ಪ್ರಕಾರ, 'ಒಟ್ಟು 31 ಜಿಲ್ಲೆಗಳಲ್ಲಿ 27 ಜಿಲ್ಲೆಗಳು ದೊಡ್ಡ ಕೊರತೆ ಅನುಭವಿಸುತ್ತಿವೆ ಎಂದು ಕೇಂದ್ರವು ಹೇಳಿದೆ. ಆದರೆ, ಇನ್ನುಳಿದ ಮೂರು ಕೊರತೆ ಕಾಣುತ್ತಿದೆ. ಒಂದು ಜಿಲ್ಲೆಯಲ್ಲಿ ಮಾತ್ರ ಸಾಮಾನ್ಯ ಮಳೆಯಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಮಳೆ ಬೀಳುತ್ತಿದೆ. ರಾಜ್ಯದಾದ್ಯಂತ ಮಳೆಯ ತೀವ್ರತೆ ಮತ್ತು ಆವರ್ತನವು ಈ ತಿಂಗಳು ಶಾಂತವಾಗಿದೆ. ರಾಜ್ಯದಾದ್ಯಂತ ಮಾನ್ಸೂನ್ ಚಟುವಟಿಕೆ ದುರ್ಬಲಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾದ ಮೂರು ಸ್ಥಳಗಳೆಂದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡ್ಲೆ ( 43 ಮಿ.ಮೀ ಮಳೆ ), ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸಾಸ್ವಿಹಳ್ಳಿ ( 37 ಮಿ.ಮೀ ಮಳೆ ) ಮತ್ತು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಅಣೆಕಟ್ಟು ( 34.5. ಮಿಮೀ ಮಳೆ ) ಪ್ರದೇಶದಲ್ಲಿ ಮಳೆಯಾಗಿದೆ.












Click it and Unblock the Notifications