ತೂಗುದೀಪ ಶ್ರೀನಿವಾಸ್ ಮಗನನ್ನು ಬಿಟ್ಟುಕೊಡಬೇಡ: ತಾಯಿ ಪ್ರೇರಣೆಯಂತೆ ನಡೆದುಕೊಂಡ ವಿನೋದ್ ರಾಜ್
ಬೆಂಗಳೂರು, ಜುಲೈ 23: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಭೇಟಿಗೆ ಕನ್ನಡ ಚಿತ್ರರಂಗದ ನಟರು ತೆರಳುತ್ತಿದ್ದು, ಹಿರಿಯ ನಟ ವಿನೋದ್ ರಾಜ್ ಕೂಡ ನಿನ್ನೆ ಜುಲೈ 22ರಂದು ಜೈಲಿಗೆ ತೆರಳಿ ಭೇಟಿ ಮಾಡಿದ್ದಾರೆ.
ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ರಾಜ್ ದರ್ಶನ್ ಭೇಟಿ ಹಿಂದಿನ ಕಾರಣವೇನು ಎನ್ನುವುದರ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ನಟ ದರ್ಶನ್ ಭೇಟಿಯಾಗಲು ನನ್ನ ತಾಯಿ ಅವರೇ ಪ್ರೇರಣೆ. ಮಂಚದಲ್ಲಿ ಮಲಗಿದಾಗಲೂ ಕೂಡ ನನ್ನ ಅಮ್ಮ ಅದನ್ನೇ ಹೇಳುತ್ತಿದ್ದರು. ಆ ತೂಗುದೀಪ್ ಶ್ರೀನಿವಾಸ ಅವರ ಮಗ ಪಾಪ. ಯಾರ ಬೆಂಬಲವೂ ಇಲ್ಲದೇ, ಬಹಳ ಕಷ್ಟಪಟ್ಟು ಬೆಳೆದ ಹುಡುಗ ಅವನು ಎನ್ನುತ್ತಿದ್ದರು.

ಬಹಳ ಕಷ್ಟಪಟ್ಟು ಬೆಳೆದ ಹುಡುಗನ ಕೈ ಬಿಡಬಾರದು. ನಾವು ದರ್ಶನ್ ಜೊತೆಯಲ್ಲಿ ಇರಬೇಕು ಅಂತಾ ನಮ್ಮ ತಾಯಿ ಅವರ ಮನಸ್ಸಿನಲ್ಲಿತ್ತು. ಅವರು ಮೊದಲೇ ಈ ಮಾತುಗಳನ್ನು ಹೇಳುತ್ತಿದ್ದರು. ಮಂಚದ ಮೇಲೆ ಮಲಗಿದ್ದಾಗಲೂ ಹೇಳಿದ ಮಾತು ಅದೇ. ದರ್ಶನ್‌ನ ಬಿಟ್ಟುಕೊಡಬೇಡ ಕಂದ ಅನ್ನುತ್ತಿದ್ದರು.
ದರ್ಶನ್ ಈಗಿನ ಪರಿಸ್ಥಿತಿ ನೆನಪಿಸಿಕೊಂಡರೆ ಬೇಸರವಾಗುತ್ತದೆ. ಯಾಕೆ ಈ ರೀತಿ ಆಯ್ತು. ಅವರನ್ನು ನಂಬಿಕೊಂಡು ಎಷ್ಟೋ ಜನ ನಿರ್ಮಾಪಕರು ಹಣ ಹೂಡಿದ್ದಾರೆ. ಒಂದು ಕಡೆ ಪ್ರಾಣ ಕಳೆದುಕೊಂಡಿರುವ ನೋವು. ಸರಿ ಯಾವುದು..? ತಪ್ಪು ಯಾವುದು..? ದಿಢೀರ್ ಅಂತಾ ಆಗುವ ಈ ಘಟನೆಗಳಿಗೆ ಯಾರು ಹೊಣೆ..? ಹೇಗೆ ಇದು ಪರಿಸ್ಥಿತಿ ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ಕೆಲವು ಘಟನೆಗಳನ್ನು ಅಚಾತುರ್ಯ, ಆ್ಯಕ್ಸಿಡೆಂಟ್ ಅಂತಾ ಹೇಳಿ ಬಿಡುತ್ತೇವೆ. ನಿಜವಾಗಿಯೂ ಇದನ್ನು ತರ್ಕ ಅಥವಾ ವಿಶ್ಲೇಷಣೆ ಮಾಡುವಷ್ಟು ಅನುಭವ ಸಾಲದು. ಪ್ರಾಣ ಕಳೆದುಕೊಂಡಿರುವ ಕಡೆಗೆ ನ್ಯಾಯ ಸಿಗಬೇಕು ಎಂದು ಹೇಳುತ್ತೇವೆ. ಇಲ್ಲಿ ನೋಡಿದಾಗ ಒಂದು ಸಂಸಾರ ನೆನಪಿಗೆ ಬರುತ್ತದೆ. ಆದ ಮೇಲೆ ಏನು ಮಾಡಲಾಗುತ್ತದೆ. ಅಲ್ಲಿ ನೋವು ಶಮನ ಆಗಬೇಕು. ಇಲ್ಲಿಯಾಗಿರುವ ಹಿಂಸೆ ಕೂಡ ಸರಿ ಹೋಗಬೇಕು. ನಮ್ಮ ಕನ್ನಡ ಚಿತ್ರರಂಗ ಚೆನ್ನಾಗಿ ಇರಬೇಕು. ನಿರ್ಮಾಪಕರು, ನಿರ್ದೇಶಕರು ಎಲ್ಲರೂ ಚೆನ್ನಾಗಿರಬೇಕು. ಮುಂದಿನ ತಲೆ ಮಾರಿಗೆ ಇವುಗಳೆಲ್ಲಾ ಪಾಠವಾಗಬೇಕು. ಜೀವನದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ವಿನೋದ್ ರಾಜ್ ಹೇಳಿದರು.












Click it and Unblock the Notifications