Second Airport: ಬೆಂಗಳೂರಲ್ಲಿ ಏರ್‌ಪೋರ್ಟ್ ನಿರ್ಮಾಣಕ್ಕೆ ಕನಕಪುರ, ತುಮಕೂರು, ದಾಬಸಪೇಟೆ ಪರಿಗಣನೆ?: ಸಚಿವ
ಬೆಂಗಳೂರು, ಜುಲೈ 08: ಕರ್ನಾಟಕ ರಾಜಧಾನಿಯಲ್ಲಿ ಇದೀಗ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣದ ಚರ್ಚೆಗಳು ಹೆಚ್ಚಾಗಿವೆ. ಇದುವರೆಗೆ ಇದು ಸಾಧ್ಯವಾ ಎನ್ನಲಾಗಿತ್ತು. ಆದರೆ ರಾಜ್ಯ ಸರ್ಕಾರ ಜಾಗ ಗುರುತಿಸಲು ಮುಂದಡಿ ಇಡುವ ಮೂಲಕ ಏರ್‌ಪೋರ್ಟ್ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ. ಇದೀಗ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್ ಅವರು ಅಧಿಕೃತ ಮಾಹಿತಿಯೊಂದನ್ನು ನೀಡಿದ್ದಾರೆ.
ಈ ಹಿಂದೆ ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಇದೇ ಸಚವರು ಅಧಿಕಾರಿಗಳಿಗೆ ಈ ಹಿಂದೆ ಸೂಚಿಸಿದ್ದರು. ಬಳಿಕ ಅಧಿಕಾರಿಗಳು ಡಿಪಿಆರ್ ರಚನೆಗೆ ಚಾಲನೆ ನೀಡುವ ಜೊತೆಗೆ ಜಾಗ ಗುರುತಿಸಲು ಮುಂದಾಗಿದ್ದರಾರೆ.

ಇದೆಲ್ಲದರ ಕುರಿತು ಭಾನುವಾರ ಸುದ್ದಿಗಾರರ ಜೊತೆಗೆ ಮಾತನಾಡಿ ಸಚಿವ ಎಂಬಿ ಪಾಟೀಲ್ ಅವರು, ಎರಡನೇ ಏರ್ಪೋರ್ಟ್ ಅಭಿವೃದ್ಧಿ ಕುರಿತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಲ್ಲಿ ಒಂದು ಸಭೆ ನಡೆದಿದೆ. ಸದ್ಯಕ್ಕೆ ಬಿಐಎಎಲ್ ಜತೆ ಚಾಲ್ತಿಯಲ್ಲಿರುವ ಒಪ್ಪಂದದಲ್ಲಿ 2033ರವರೆಗೂ 150 ಕಿ.ಮೀ. ಅಂತರದಲ್ಲಿ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಬಾರದು ಎಂಬ ಷರತ್ತಿದೆ. ನಾವು ಈಗಿನಿಂದಲೇ ಕಾರ್ಯ ಪ್ರವೃತ್ತರಾದರೆ ಇನ್ನು ಎಂಟು ವರ್ಷಗಳಲ್ಲಿ ಪ್ರಗತಿ ಸಾಧಿಸಬಹುದು ಎಂದರು.
ರಾಜಧಾನಿಯ ಸಮೀಪ ಮತ್ತೊಂದು ವಿಮಾನ ನಿಲ್ದಾಣ ಅತ್ಯಗತ್ಯವಾಗಿದೆ. ಇದನ್ನು ಎಲ್ಲಿ ನಿರ್ಮಿಸಬೇಕು ಎನ್ನುವ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ಮತ್ತು ಮುಖ್ಯಮಂತ್ರಿಗಳ ಜತೆ ವಿಚಾರ ವಿನಿಮಯ ನಡೆಸಿ, ತೀರ್ಮಾನಿಸಲಾಗುವುದು ಎಂದು ಹೇಳಿದರು.
ಕನಕಪುರ, ತುಮಕೂರು, ದಾಬಸಪೇಟೆ ಪರಿಗಣನೆ?
ಪ್ರಯಾಣಿಕರ ಒತ್ತಡ ನೋಡಿದರೆ ಬೆಂಗಳೂರಿನ ದಕ್ಷಿಣ ಭಾಗ, ಕನಕಪುರ ಇತ್ಯಾದಿ ಭಾಗಗಳಿವೆ. ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲೇ ನೂತನ ವಿಮಾನ ನಿಲ್ದಾಣವು ಬರಬೇಕು ಎಂದಾದರೆ ಡಾಬಸಪೇಟೆ, ತುಮಕೂರು ಇತ್ಯಾದಿಗಳು ಬರುತ್ತವೆ. ಇವೆಲ್ಲವನ್ನೂ ಪರಿಗಣಿಸಿ ಸ್ಥಳ ನಿಗದಿ, ಭೂ ಸ್ವಾಧೀನ, ಪರಿಹಾರ ಹಂಚಿಕೆ ಇತ್ಯಾದಿಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಮುಂಬೈನಲ್ಲಿ ಎರಡನೇ ಏರ್‌ಪೋರ್ಟ್ ಇದೆ
ಮುಂಬೈ ನಗರದಲ್ಲಿ ಎರಡು ವಿಮಾನ ನಿಲ್ದಾಣಗಳ ನಡುವೆ ಕೇವಲ 36 ಕಿ.ಮೀ. ಅಂತರವಿದೆ. ನ್ಯೂಯಾರ್ಕ್ ಮತ್ತು ಲಂಡನ್ ನಗರಗಳಲ್ಲಿ ಕೂಡ ಹೆಚ್ಚು ದೂರವಿಲ್ಲ. ಜೊತೆಗೆ, ಬಿಐಎಎಲ್ ಹೊಂದಿರುವ ಷರತ್ತು ತಮಿಳುನಾಡಿಗೂ ಅನ್ವಯಿಸುತ್ತದೋ ಇಲ್ಲವೋ ಪರಿಶೀಲಿಸಬೇಕು ಎಂದು ಅವರು ವಿವರಿಸಿದರು.
ನಾವು ಎರಡನೇ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ ಮೇಲೆ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಏರ್ಪೋರ್ಟ್ ಕಟ್ಟುವುದಾಗಿ ಹೇಳುತ್ತಿದೆ. ಇದರ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಲಾಗುವುದು ಎಂದರು.
ಮಾಜಿ ಸಿಎಂ ಸಹ ಆಕ್ಷೇಪ
ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮಿಳುನಾಡು ಸರ್ಕಾರವು ಹೊಸೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು ಸರಿಯಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ ಎಂದು ಹೇಳಿದ್ದರು.
ಸದ್ಯ ರಾಜ್ಯ ರಾಜಧಾನಿಯಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಅಧಿಕೃತವಾಗಿದೆ. ಇತ್ತ ತಮಿಳುನಾಡು ಸರ್ಕಾರ ಸಹ ಏರ್‌ಪೋರ್ಟ್ ನಿರ್ಮಾಣದ ಘೋಷಣೆ ಮಾಡಿದೆ. ಹೀಗಾಗಿ ಇತ್ತೀಚೆಗೆ ಇದರದ್ದೆ ಸುದ್ದಿ ಆಗಿದೆ.












Click it and Unblock the Notifications