ಆನೇಕಲ್ ಫಾರ್ಮ್ ಹೌಸ್ ಬದಲಿಗೆ ದೇವನಹಳ್ಳಿ ರೆಸಾರ್ಟಿಗೆ ಶಶಿಕಲಾ
ಬೆಂಗಳೂರು, ಜನವರಿ 31: ಎಐಎಡಿಎಂಕೆಯ ಉಚ್ಚಾಟಿತ ನಾಯಕಿ ಶಶಿಕಲಾ ನಟರಾಜನ್ ಅವರು ಜೈಲು ಹಾಗೂ ಆಸ್ಪತ್ರೆಯಿಂದ ಬಿಡುಗಡೆಗೊಂಡ ಬಳಿಕ ಎಲ್ಲಿಗೆ ತೆರಳಲಿದ್ದಾರೆ ಎಂಬ ಕುತೂಹಲಕ್ಕೆ ತೆರೆಬಿದ್ದಿದೆ. ಕೊವಿಡ್ 19 ನಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಶಶಿಕಲಾ ಅವರು ಇನ್ನಷ್ಟು ಕಾಲ ಬೆಂಗಳೂರಿನಲ್ಲೇ ನೆಲೆಸಲಿದ್ದಾರೆ. ಆದರೆ, ಆನೇಕಲ್ ಸಮೀಪದ ಫಾರ್ಮ್ ಹೌಸ್ ಬದಲಿಗೆ ದೇವನಹಳ್ಳಿಯ ರೆಸಾರ್ಟಿಗೆ ಶಶಿಕಲಾ ಹಾಗೂ ಪರಿವಾರ ತೆರಳಿದೆ.
ವಿಕ್ಟೋರಿಯಾ ಅಸ್ಪತ್ರೆಯಿಂದ ಡಿಸ್ಚಾರ್ಜ್ ಅಗರುವ ವಿ ಕೆ ಶಶಿಕಲಾ ಅವರು ಡಿಸ್ಚಾರ್ಜ್ ಆದ ಬಳಿಕ ಕೆಲ ದಿನಗಳ ಕಾಲ ಬೆಂಗಳೂರಿನಲ್ಲೆ ವಿಶ್ರಾಂತಿ ಪಡೆಯಲಿದ್ದಾರೆ. ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ - ಆನೇಕಲ್ ಸಮೀಪದ ಫಾರ್ಮ್ ಹೌಸ್‌ನಲ್ಲಿ ಶಶಿಕಲಾ ಹಾಗೂ ಆಪ್ತರು ತಂಗಲಿದ್ದಾರೆ ಎಂಬ ಸುದ್ದಿಯಿತ್ತು. ಆದರೆ, ದೇವನಹಳ್ಳಿ ಬಳಿಯ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟಿಗೆ ಶಶಿಕಲಾ ಆಗಮಿಸಿದ್ದಾರೆ.
''ವೈದ್ಯರ ಸಲಹೆ ಮೇರೆಗೆ ಶಶಿಕಲಾ ಅವರು ಇನ್ನೂ 7 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ, ಇದಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ, ತಮಿಳುನಾಡಿನ ರಾಜಕೀಯಕ್ಕೆ ಸದ್ಯಕ್ಕೆ ಏನು ಪ್ರತಿಕ್ರಿಯಿಸಲಾರೆ'' ಎಂದು ಅಳಿಯ ಟಿಟಿವಿ ದಿನಕರನ್ ಹೇಳಿದ್ದಾರೆ.

ಫೆಬ್ರವರಿ 3ರವರೆಗೆ ವಿಶ್ರಾಂತಿ ಪಡೆಯಲಿರುವ ನಂತರ ಜ್ಯೋತಿಷಿಗಳ ಸಲಹೆ ಮೇರೆಗೆ ಶುಭ ದಿನಾಂಕ ಪಡೆದು ಚೆನ್ನೈ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಮಾಹಿತಿಯಿದೆ. ಈ ನಡುವೆ ಚೆನ್ನೈಗೆ ತೆರಳುವ ಮಾರ್ಗದಲ್ಲಿ ಅದ್ದೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೃಷ್ಣಗಿರಿ ಜಿಲ್ಲೆಯ ಹೊಸೂರು ಭಾಗದ ಬೆಂಬಲಿಗ ಸಾಂಬಶಿವನ್ ಅವರು ಪಿಟಿಐ ಜೊತೆ ಮಾತನಾಡಿ, ನಮಗೆಲ್ಲ ಹಬ್ಬದ ವಾತಾವರಣ ಉಂಟಾಗಿದೆ. ಚಿನ್ನಮ್ಮ ಬರುವುದನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಏಪ್ರಿಲ್ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಎಐಎಡಿಎಂಕೆಗೆ ಶಶಿಕಲಾ ವಾಪಸ್ ಕರೆಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ. ದಿನಕರನ್ ಎಎಂಎಂಕೆ ಪಕ್ಷಕ್ಕೆ ಬೆಂಬಲವಾಗಿ ಶಶಿಕಲಾ ನಿಲ್ಲುವ ಸಾಧ್ಯತೆಯಿದೆ.












Click it and Unblock the Notifications