ಸಂತೋಷ್ ಲಾಡ್ ಮತ್ತಷ್ಟು ಸಂಕಷ್ಟ ತಂದ ಹಿರೇಮಠ್

ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಹಿರೇಮಠ್, ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಸಚಿವ ಸಂತೋಷ್ ಲಾಡ್ ಅವರನ್ನು ಸಿದ್ದರಾಮಯ್ಯ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸಂತೋಷ್ ಲಾಡ್ ವಿ.ಎಸ್.ಲಾಡ್ ಅಂಡ್ ಸನ್ಸ್ ಎಂಬ ಕಂಪೆನಿ ಹೆಸರಿನಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದಾರೆ. ಒಟ್ಟು 68 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು 80 ಸಾವಿರ ಮೆಟ್ರಿಕ್‌ಟನ್ ಅದಿರನ್ನು ಸಾಗಾಣೆ ಮಾಡಿದ್ದಾರೆ ಎಂದು ಹಿರೇಮಠ್ ತಿಳಿಸಿದರು.
ಅಕ್ರಮ ಗಣಿಗಾರಿಕೆ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸಂತೋಷ್ ಲಾಡ್ ಸವಾಲು ಹಾಕಿದ್ದರು. ಆದ್ದರಿಂದ ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ ಎಂದು ಹಿರೇಮಠ್ ತಿಳಿಸಿದರು.
ಮುಖ್ಯಮಂತ್ರಿಗಳು ಸಾಮಾಜಿಕ ಕಳಕಳಿಯಿಂದ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುವರು ಎಂಬ ಭರವಸೆ ಇದೆ. ಕೆಪಿಸಿಸಿ ಅಧ್ಯಕ್ಷರು ಮತ್ತು ರಾಜ್ಯಪಾಲರು ಸಂತೋಷ್ ಲಾಡ್ ವಜಾಗೊಳಿಸುವಂತೆ ಸಿಎಂಗೆ ಸಲಹೆ ನೀಡಬೇಕು ಎಂದು ಹಿರೇಮಠ್ ಮನವಿ ಮಾಡಿದರು. (ಸಂತೋಷ್ ಲಾಡ್ ರಾಜೀನಾಮೆಗೆ ಹಿರೇಮಠ್ ಆಗ್ರಹ)
ಸಂಡೂರು ವಲಯ ಅರಣ್ಯಾಧಿಕಾರಿ ವಿ.ಎಸ್.ಲಾಡ್ ಆಂಡ್ ಸನ್ಸ್ ಕಂಪೆನಿಯಿಂದ 81,529 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಾಣೆ ಮಾಡಲಾಗುತ್ತಿದೆ. ಅದನ್ನು ವಶಪಡಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದು ಹಿರೇಮಠ್ ಹೇಳಿದರು.
ಸಂವಿಧಾನ ಬದ್ಧವಾಗಿ ಅಧಿಕಾರ ಸ್ವೀಕರಿಸುವ ಸಚಿವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಹಿರೇಮರ್ ಆಗ್ರಹಿಸಿದರು. ಈ ಮೂಲಕ ಸಂತೋಷ್ ಲಾಡ್ ವಿರುದ್ಧ ಎರಡನೇ ಹಂತದ ಹೋರಾಟಕ್ಕೆ ಹಿರೇಮಠ್ ಚಾಲನೆ ನೀಡಿದ್ದಾರೆ.












Click it and Unblock the Notifications