ಬಿಬಿಎಂಪಿಗೆ ಚಳಿ ಬಿಡಿಸಿದ ಗಾಯಕ: ಮಳೆ ನೀರಿನ ರಸ್ತೆಯಲ್ಲಿ ಈಜಾಡದೇ ಪುಟ್‌ಪಾತ್ ಮೇಲೆ ನಡೆದಿದ್ದು ನಂದೇ ತಪ್ಪು!
ಬೆಂಗಳೂರು, ಮೇ. 11: ಬಿಬಿಎಂಪಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಬೆಂಗಳೂರಿನ ಗಾಯಕ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಮಳೆ ಬೀಳುತ್ತಿದ್ದ ವೇಳೆ ಪುಟ್ ಪಾತ್‌ನಲ್ಲಿ ತೆರೆದ ಗುಂಡಿಗೆ ಬಿದ್ದು ಗಾಯಕ ಅಜಯ್ ವಾರಿಯರ್ ಕಾಲಿಗೆ ಗಂಭೀರ ಪೆಟ್ಟು ಮಾಡಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿಬಿಎಂಪಿಯ ಅವಘಡಗಳು ಒಂದೆರಡಲ್ಲ. ಬಿಬಿಎಂಪಿ ಕಸದ ಲಾರಿಗಳಿಗಳಿಗೆ ಅನೇಕ ಮಂದಿ ಬಲಿಯಾದ ಘಟನೆಗಳು ಇನ್ನೂ ಮಾಸಿಲ್ಲ. ಮಿಗಿಲಾಗಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚದಿದ್ದರೆ ಬಿಬಿಎಂಪಿ ಅಧಿಕಾರಿಗಳನ್ನೇ ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಹೈಕೋರ್ಟ್ ಒಂದು ಹತ್ತು ಬಾರಿ ಎಚ್ಚರಿಕೆ ನೀಡಿರಬಹುದು. ಆದ್ರೂ ಕುಂಭಕೋಣ ನಿದ್ದೆಯಿಂದ ಬಿಬಿಎಂಪಿ ಅಧಿಕಾರಿಗಳು ಎದ್ದು ಬಂದಂತೆ ಕಾಣುತ್ತಿಲ್ಲ. ಇದೀಗ ಗಾಯಕ ಅಜಯ್ ವಾರಿಯರ್ ಪುಟ್ ಪಾತ್ ಗುಂಡಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಅದೃಷ್ಟ ವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ಗಾಯಕ ಅಜಯ್ ವಾರಿಯರ್ ತನ್ನ ಅನುಭವವನ್ನು ಫೇಸ್ ಬುಕ್ ಮೂಲಕ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಧಾರಾಕಾರ ಮಳೆ ಸುರಿಯುತ್ತಿತ್ತು. ಕೇರಳಕ್ಕೆ ತೆರಳಬೇಕಿದ್ದ ನಾನು ರೈಲ್ವೇ ನಿಲ್ದಾಣದ ಕಡೆಗೆ ಹೊರಟಿದ್ದೆ. ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಕೊಡಲು ಪ್ಲಾನ್ ಮಾಡಿಕೊಂಡಿದ್ದೆ. ಓಲಾ ಉಬರ್ ಬಕ್ ಮಾಡಲು ಯತ್ನಿಸಿ ವಿಫಲವಾದೆ. ಹೀಗಾಗಿ ರಸ್ತೆಯ ಕಡೆಗೆ ನಡೆದು ಹೋಗಲು ನಿರ್ಧರಿಸಿ ಫುಟ್ ಪಾತ್ ಮೂಲಕ ನಡೆದುಕೊಂಡು ಹೊದೆ.
ಕೆಲವು ಹೆಜ್ಜೆ ನಡೆದು ಸಾಗಿದ ಬಳಿಕ ನಿಯಂತ್ರಣ ತಪ್ಪಿ ಗುಂಢಿಗೆ ಬಿದ್ದೆ. ಏನೆಂದು ತಿಳಿಯುವುದರಲ್ಲಿ ಚರಂಡಿ ಒಳಗೆ ಹೋದೆ. ನನ್ನ ಎದೆ ಮಟ್ಟದ ನೀರು ಇತ್ತು. ಅದೃಷ್ಟ ವಶಾತ್ ನಾನು ಹೇಗೋ ಬಚಾವ್ ಆದೆ. ಆದ್ರೆ ನನ್ನ ಕಾಲಿಗೆ ತುಂಬಾ ಪೆಟ್ಟಾಗಿದೆ ಎಂದು ನಡೆದ ಘಟನೆಯನ್ನು ಅಜಯ್ ವಾರಿಯರ್ ನೋವು ತೋಡಿಕೊಂಡಿದ್ದಾರೆ.

ಫುಟ್ ಪಾತ್ ಗುಂಡಿ ಮುಚ್ಚದ ಕಾರಣ ನಾನು ಕಾಲಿಗೆ ಪೆಟ್ಟು ತಿನ್ನುವಂತಾಯಿತು. ಅನೇಕ ಕಾರ್ಯಕ್ರಮಗಳನ್ನು ಕೈ ಬಿಟ್ಟಿದ್ದೇನೆ. ಇದಕ್ಕೆಲ್ಲಾ ಯಾರನ್ನು ದೂಷಣೆ ಮಾಡಬೇಕು? ನನ್ನನ್ನೇ. ನಾನು ಪುಟ್ ಪಾತ್ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಬದಲಿಗೆ ಬಳೆ ಬಿದ್ದು ನಿಂತಿದ್ದ ರಸ್ತೆಯಲ್ಲಿ ಈಜಾಡಿಕೊಂಡು ಹೋಗಬೇಕಿತ್ತು. ಜನರನ್ನು ಎಚ್ಚರಿಸುವ ಕಾರಣಕ್ಕೆ ಈ ಸಂದೇಶ ನೀಡುತ್ತಿದ್ದೇನೆ.
ಪುಟ್ ಪಾತ್ ಗುಂಡಿ ಮುಚ್ಚದ ಕಾರಣ ಯಾರು ಬೇಕಾದರೂ ಚರಂಡಿ ಸೇರಬಹುದು. ಪುಟ್ ಪಾತ್ ಗುಂಡಿ ಮುಚ್ಚದ ಕಾರಣ ಯಾರು ಬೇಕಾದರೂ ಅಪಾಯ ಎದುರಿಸಬಹುದು. ಚಿಕ್ಕ ಮಕ್ಕಳು ಈ ಪುಟ್ ಪಾತ್ ಗುಂಡಿಗಳಿಗೆ ಇ ಬಿದ್ದರೆ ಏನು ಗತಿ? ನಾನು ಕಾನೂನು ಪರಿಪಾಲಿಸುವ ಬೆಂಗಳೂರಿನ ಪ್ರಜೆ. ಈ ನಗರದ ಜನರಿಗೆ ಸುರಕ್ಷಿತ ರಸ್ತೆ ಮತ್ತು ಪುಟ್ ಪಾತ್ ನೀಡಿ ಎಂದು ಒತ್ತಾಯಿಸುತ್ತಿದ್ದೇನೆ. ಇದು ಬಿಬಿಎಂಪಿ ಅಧಿಕಾರಿಗಳಿಗೆ ನನ್ನ ಬಹಿರಂಗ ಪತ್ರ ಎಂದು ಅಜಯ್ ವಾರಿಯರ್ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗಿ ಬಿದ್ದು ಮುಗ್ಧರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಬಿಬಿಎಂಪಿ ಕಸದ ಲಾರಿಗಳ ಅಪಘಾತಗಳಿಂದಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮಳೆಗಾಲ ಬಂದರೆ ಬಾಯಿ ತೆರೆದು ನಿಂತಿರುವ ಪುಟ್ ಪಾತ್ ಗುಂಡಿಗಳು ನಡೆದುಕೊಂಡು ಹೋಗುವರನ್ನು ಒಳಗೆ ಎಳೇದುಕೊಂಡು ವೃಷಭಾವತಿ ನಾಲೆಗೆ ರವಾನಿಸುತ್ತವೆ. ಇಷ್ಟೆಲ್ಲಾ ಅವಘಡಗಳು ಸಂಭವಿಸಿದ್ರೂ ಏನೂ ಪ್ರಯೋಜನ ಆಗುತ್ತಿಲ್ಲ.












Click it and Unblock the Notifications