‘ಟಗರು’ ಪರ ‘ಟಗರು’ ಪ್ರಚಾರ: ವರುಣಾ ಕ್ಷೇತ್ರದಲ್ಲಿ ಸಂಚಲನ
ಮೈಸೂರು: ಸಿದ್ದರಾಮಯ್ಯ VS ಸೋಮಣ್ಣ ಕಾದಾಟದಲ್ಲಿ ವರುಣಾ ಅಖಾಡ ರಂಗೇರಿದೆ. ಬಿಜೆಪಿ ನಾಯಕರ ದಂಡೇ ದಿಲ್ಲಿಯಿಂದ ಮೈಸೂರಿಗೆ ದೌಡಾಯಿಸಿ ಸಿದ್ದರಾಮಯ್ಯ ವಿರುದ್ಧ ಪ್ರಚಾರ ಅಖಾಡಕ್ಕೆ ಇಳಿದಿದ್ದರೆ, ಇತ್ತ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಖಾಡ ಪ್ರವೇಶಿಸುತ್ತಿದ್ದಾರೆ. ಚಿತ್ರರಂಗದ ತಾರೆಯರ ದಂಡೇ 'ಟಗರು' ಪರ ಕ್ಯಾಂಪೇನ್ ನಡೆಸೋದು ಪಕ್ಕಾ ಆಗಿದೆ.
ಚುನಾವಣೆ ಕಾವು ಕ್ಷಣಕ್ಷಣಕ್ಕೂ ಏರುತ್ತಿದೆ. ಹೈವೋಲ್ಟೇಜ್ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ವರುಣಾ ಮೇಲೆ ದೇಶದ ಗಮನ ನೆಟ್ಟಿದೆ. ಈಗಾಗಲೇ ವಿವಿಧ ಅಭ್ಯರ್ಥಿಗಳ ಪರ ಕನ್ನಡ ಚಿತ್ರರಂಗದ ನಟರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಅದೇ ರೀತಿ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಹಿರಿಯ ನಟ ಶಿವರಾಜ್‌ಕುಮಾರ್ ಕ್ಯಾಂಪೇನ್ ಮಾಡಲಿದ್ದಾರಂತೆ. ಬಿಜೆಪಿ ನಾಯಕರ ಪರ ಸ್ಟಾರ್ ಪ್ರಚಾರಕರಾಗಿ ಕಿಚ್ಚ ಸುದೀಪ್ ಎಲ್ಲೆಡೆ ಅಬ್ಬರಿಸಿದ್ದಾರೆ. ಇದೀಗ ಕಾಂಗ್ರೆಸ್ ಪರ ಪ್ರಚಾರಕ್ಕೆ ಶಿವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ.

'ಟಗರು'ಗೆ ರಮ್ಯಾ, ದುನಿಯಾ ವಿಜಯ್ ಸಾಥ್
ಇನ್ನು ಮೂಲಗಳ ಪ್ರಕಾರ ಮಾಜಿ ಸಿಎಂ ಸಿದ್ದರಾಮಯ್ಯ ಪರ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ರಣಕಾಳಗ ನಡೆಯುತ್ತಿರುವ ಹೊತ್ತಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್ ದಂಡೇ ಇಲ್ಲಿಗೆ ಬರುತ್ತಿರುವುದು ವಿಶೇಷ. ಮೇ 4ಕ್ಕೆ ವರುಣಾದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರದ ಹಬ್ಬವೇ ನಡೆಯುವ ಮುನ್ಸೂಚನೆ ಸಿಕ್ಕಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಟಿ ರಮ್ಯಾ, ದುನಿಯಾ ವಿಜಯ್ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಪರ ರಮ್ಯಾ ಪ್ರಚಾರ
ಇನ್ನು ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಸಂಸದೆ ಆಗಿದ್ದ ನಟಿ ರಮ್ಯಾ 2019ರ ಲೋಕಸಭೆ ಚುನಾವಣೆ ಬಳಿಕ, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಇದೀಗ ಕೇಂದ್ರ ನಾಯಕರು ನಟಿ ಮನವೊಲಿಕೆ ಮಾಡಿ ಪ್ರಚಾರಕ್ಕೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಮ್ಯಾ ಮಾಜಿ ಸಿಎಂ ಸಿದ್ದರಾಮಯ್ಯ ಪರ ಕ್ಯಾಂಪೇನ್ ಮಾಡಲಿದ್ದಾರಂತೆ. ಇದು ವರುಣಾ ಕ್ಷೇತ್ರ ಮತ್ತಷ್ಟು ರಂಗೇರುವಂತೆ ಮಾಡಿದೆ. ಸಿದ್ದರಾಮಯ್ಯ VS ಸೋಮಣ್ಣ ಕಾಳಗದಲ್ಲಿ ಗೆಲುವು ಯಾರಿಗೆಂಬ ಪ್ರಶ್ನೆ ಮತ್ತಷ್ಟು ಕ್ರೇಜ್ ಹುಟ್ಟುಹಾಕಿದೆ.
ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಬ್ರಹ್ಮಾಸ್ತ್ರ
ಕಾಂಗ್ರೆಸ್‌ನ ಮಾಸ್ ಲೀಡರ್‌ಗಳ ಪೈಕಿ ಸಿದ್ದರಾಮಯ್ಯ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಆದರೆ 2018ರ ಚುನಾವಣೆಯಲ್ಲಿ ಮೈಸೂರಿನಲ್ಲೇ ಹೀನಾಯವಾಗಿ ಸೋಲು ಎದುರಾಯ್ತು. ಈಗ ಇದೇ ಅಸ್ತ್ರ ಮರು ಪ್ರಯೋಗಿಸಲು ಬಿಜೆಪಿ ಸಿದ್ಧವಾದಂತೆ ಕಾಣುತ್ತಿದೆ. ಸಿದ್ದರಾಮಯ್ಯ ಇದು ಕೊನೇ ಚುನಾವಣೆ ಅಂತಾ ಬೇರೆ ಹೇಳಿಬಿಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಲಾಕ್ ಆಗುವಂತೆ ಮಾಡಿದರೆ, ಈ ಕಾರಣಕ್ಕೆ ವರುಣಾ ರಣಕಣ ರಂಗೇರಿದೆ.
ಜಾತಿ ಲೆಕ್ಕಾಚಾರ ಹೇಳುವುದೇನು?
ವರುಣಾ ಕ್ಷೇತ್ರದಲ್ಲಿ ಗೆದ್ದೇ ಗೆಲ್ಲಬೇಕು ಎಂಬ ಹಠ ಬಿಜೆಪಿ ನಾಯಕರದ್ದು. ಹೀಗಾಗಿಯೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈಗ ಜಾತಿ ಲೆಕ್ಕಾಚಾರ ಕೂಡ ಶುರುವಾಗಿದೆ. ಹಾಗಾದರೆ ವರುಣಾ ಕ್ಷೇತ್ರದಲ್ಲಿನ ಜಾತಿವಾರು ಮತದಾರರನ್ನು ನೋಡುವುದಾದರೆ ಇಲ್ಲಿ 55 ಸಾವಿರ ಲಿಂಗಾಯತ ಮತದಾರರಿದ್ದು ಇವರದ್ಧೇ ನಿರ್ಣಾಯಕ ಪಾತ್ರ ಎನ್ನಬಹುದು. ಲಿಂಗಾಯತ ಮತದಾರರನ್ನ ಬಿಟ್ಟರೆ, ಕುರುಬ ಸಮುದಾಯದ ಮತದಾರರು 35 ಸಾವಿರದಷ್ಟು ಇದ್ದಾರೆ.
ಇನ್ನುಳಿದವರ ಪಾತ್ರ ಬಹುಮುಖ್ಯ!
ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವಿಗೆ ಚುನಾವಣಾ ಲೆಕ್ಕಾಚಾರ ಶುರುವಾಗುವುದೇ ಇಲ್ಲಿ. ಲಿಂಗಾಯತ ಹಾಗೂ ಕುರುಬ ಸಮುದಾಯದ ಮತಗಳನ್ನು ಹೊರತುಪಡಿಸಿ, ಪರಿಶಿಷ್ಟ ಜಾತಿ ಸಮುದಾಯದ 43 ಸಾವಿರ ಮತದಾರರು ಸೇರಿದಂತೆ ಪರಿಶಿಷ್ಟ ಪಂಗಡದ 23 ಸಾವಿರ ಮತಗಳು ಇಲ್ಲಿವೆ. ಇನ್ನುಳಿದಂತೆ ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದ 12 ಸಾವಿರ ಮತಗಳು ವರುಣಾ ಕ್ಷೇತ್ರದಲ್ಲಿ ಇರುವುದು ಗಮನಾರ್ಹ.
ಒಟ್ನಲ್ಲಿ ಮತದಾನಕ್ಕೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಅಸ್ತ್ರ ಮತ್ತು ಪ್ರತ್ಯಸ್ತ್ರ ಜೋರಾಗಿದೆ. ರಾಜಕೀಯ ಪಕ್ಷಗಳ ಆರೋಪ, ಪ್ರತ್ಯಾರೋಪಕ್ಕೆ ಕರ್ನಾಟಕದ ಮತದಾರ ಪ್ರಭು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾನೆ ಎಂಬುದನ್ನ ಕಾದು ನೋಡಬೇಕು. ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಅಂದೇ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ವಿ. ಸೋಮಣ್ಣ ಅವರ ರಾಜಕೀಯ ಭವಿಷ್ಯವೂ ನಿರ್ಧಾರವಾಗಲಿದೆ.











Click it and Unblock the Notifications