ಈಗೇನಿದ್ರೂ ನ್ಯೂಸ್ ನೋಡೋದು..ನಾವೇನು ಮಾಡಬಾರದು ಅಂತಾ ಕಲಿಯೋದು-ನಟ ಸುದೀಪ್
ಬೆಂಗಳೂರು, ಜೂನ್ 17: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಜೈಲುಪಾಗಿ ವಾರಗಳು ಕಳೆಯುತ್ತಿದ್ದು, ನಿನ್ನೆ ಮೊದಲ ಬಾರಿಗೆ ಪ್ರಕರಣದ ಬಗ್ಗೆ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಈ ಕೇಸ್‌ನಲ್ಲಿ ಚಿತ್ರೋದ್ಯಮದ ನಿಲುವೇನು ಎನ್ನುವ ಪ್ರಶ್ನೆಗೆ ಸುದೀಪ್ ಖಾರವಾಗಿ ಉತ್ತರಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ರೋದ್ಯಮ ಯಾವ ನಿಲುವು ತೆಗೆದುಕೊಳ್ಳುತ್ತದೆ ಎಂದು ದಯವಿಟ್ಟು ಕೇಳಬೇಡಿ. ಈ ರೀತಿ ನಿಲುವು ತೆಗೆದುಕೊಂಡಾಗಲೆಲ್ಲಾ..ನಾವೆಲ್ಲಾ ಎಷ್ಟು ಜೋಕ್ಸ್ ಆಗಿದ್ದೇವೆ ಎಂದರೆ. ಯಾರೋ ಒಬ್ಬರು ಬರುತ್ತಾರೆ, ನಮಗೆ ಸಿಕ್ಕಾಪಟ್ಟೆ ಹೊಡೆಯುತ್ತಿದ್ದಾರೆ ಇವರು ಮನೆಯಲ್ಲಿ ಎಂದು ಇನ್ನೊಬ್ಬರ ಮನೆಗೆ ಹೋಗುತ್ತಾರೆ.

ಅವರಿಂದ ಬೆಂಬಲ ಕೇಳುತ್ತಾರೆ. ಅವರು ಅವರಿಗೆ ಸಪೋರ್ಟ್ ಮಾಡುತ್ತಾರೆ. ಅಂತಿಮವಾಗಿ ಅವರಿಬ್ಬರು ಒಂದಾಗುತ್ತಾರೆ. ಸಪೋರ್ಟ್ ಮಾಡಿದವರು ಗೂಬೆಗಳ ತರ ಕಾಣುತ್ತಾರೆ. ಪಾಠ ಮುಗಿತು. ಈಗ ನಾವೇನು ಮಾಡಬೇಕು ಅಂದರೆ ಮನೆಗೆ ಹೋಗಬೇಕು. ಚಾನೆಲ್ ಆನ್ ಮಾಡಬೇಕು. ನ್ಯೂಸ್ ನೋಡಬೇಕು. ಏನೇನು ಹೇಳುತ್ತಾರೆ ಕೇಳಿ, ನಾವೇನು ಮಾಡಬಾರದು ಅಂತಾ ಕಲಿಯಬೇಕು ಎಂದು ನಟ ಸುದೀಪ್ ಹೇಳಿದ್ದಾರೆ.
ಹೀರೋ ಆದವರು ಬೇರೆಯವರು ಅನುಸರಿಸುವ ರೀತಿ ಇರಬೇಕು ಎನ್ನುವುದಕ್ಕೆ ಉತ್ತರ ನೀಡಿದ ಅವರು, ದಿನ ಬೆಳಗಾದರೆ ನಾನು ತಪ್ಪು ಮಾಡುತ್ತೇನೆ. ಮನೆಯಲ್ಲಿ ಬೈಸ್ಕೋಳ್ಳುತ್ತಿರುತ್ತೇನೆ. ಸೆಲೆಬ್ರೆಟಿಗಳು ಅಂದಾಕ್ಷಣ ನಾವೇನು ದೇವರಲ್ಲ, ದಯವಿಟ್ಟು ನಮ್ಮನ್ನು ಹಾಗೆ ಟ್ರೀಟ್ ಕೂಡ ಮಾಡಬೇಡಿ. ಆ ರೀತಿ ಅಂದುಕೊಳ್ಳಲೂ ಬೇಡಿ. ನಾವು ಮಾಡುವುದೆಲ್ಲಾ ಸರಿನೇ ಮಾಡಬೇಕು ಎನ್ನುವ ಒತ್ತಡವನ್ನು ನಮ್ಮ ಮೇಲೆ ಹಾಕಬೇಡಿ. ಯಾಕೆಂದರೆ ತಪ್ಪುಗಳನ್ನು ಮಾಡುವವರೇ ಮನುಷ್ಯ. ಪ್ಲಾಪ್‌ಗಳನ್ನು ಕೊಡೋದೇ ಹೀರೋ. ಕಲಿಯೋಣ ಮುಂದೆ ಹೋಗೋಣ ಎಂದಿದ್ದಾರೆ.
ಚಿತ್ರರಂಗದಿಂದ ದರ್ಶನ್ ಬ್ಯಾನ್ ಬಗ್ಗೆ ಸುದೀಪ್ ಹೇಳಿದ್ದೇನು..?
ಇದೇ ವೇಳೆ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿ ಮಾಧ್ಯಮಗಳು ಸುದೀಪ್ ಅವರನ್ನು ಪ್ರಶ್ನೆ ಮಾಡಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ನಾವು ಯಾರನ್ನೂ ಬ್ಯಾನ್ ಮಾಡಲು ಆಗಲ್ಲ. ಈ ಕೇಸ್ನಿಂದ ಹೊರಗೆ ಬಂದರೆ ಬ್ಯಾನ್ ಅನ್ನುವ ಪದ ಬರಲ್ಲ. ಇಲ್ಲಿ ಬೇಕಾಗಿರುವುದು ನ್ಯಾಯ. ಎಲ್ಲರೂ ನೋಡುತ್ತಿರುವುದು ಪೊಲೀಸರು ಏನು ಕೆಲಸ ಮಾಡುತ್ತಿದ್ದಾರೆ ಎನ್ನುವುದು ಮಾತ್ರ.

ಇನ್ನು ಮಾತು ಮುಂದುವರಿದ ವೇಳೆ ಈ ಹಿಂದೆ ನಟ ಜಗ್ಗೇಶ್ ಅವರನ್ನು ಬ್ಯಾನ್ ಮಾಡಿದಾಗ ಅಣ್ಣವ್ರು ಒಂದು ಮಾತು ಹೇಳಿದ್ದರಂತೆ ದಯವಿಟ್ಟು ಬ್ಯಾನ್ ಎನ್ನುವ ಪದವನ್ನು ಯಾರಿಗೂ ಬಳಸಬೇಡಿ ಎಂದು ಹೇಳಿದ್ದರು. ಈ ಬಗ್ಗೆ ನಿಮ್ಮ ಅಭಿಪ್ರಾಯ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನಟ ಸುದೀಪ್, ಈ ವಿಚಾರವನ್ನು ಇಲ್ಲಿಗೆ ಮುಗಿಸುತ್ತೇನೆ ಎಂದಿದ್ದಾರೆ.
ಅಣ್ಣವ್ರು ಹೇಳಿದ ಬಗ್ಗೆ ಪರವಾಗಿ ಅಥವಾ ವಿರುದ್ಧವಾಗಿ ಮಾತನಾಡುವಷ್ಟು ದೊಡ್ಡವನು ನಾನಲ್ಲ. ಜಗ್ಗೇಶ್ ಅವರು ನಮ್ಮ ಸಹೋದರರು, ಅವರಿಗೆ ನಮಗಿಂತ ಜಾಸ್ತಿ ತಿಳುವಳಿಕೆ ಇದೆ. ಇನ್ನು ಬೇಡದಿದ್ದ ವಿಚಾರದಲ್ಲಿ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಎನ್ನುವುದರ ಬಗ್ಗೆ ನಮಗಿಂತ ಚೆನ್ನಾಗಿ ಅವರಿಗೆ ಗೊತ್ತಿದೆ ಎಂದರು.












Click it and Unblock the Notifications