ಡಿವಿಎಸ್ ಮಗನ ರೇಪ್ ಕೇಸ್, ಬಿಜೆಪಿ ಬಾಸ್ ಗರಂ
ನವದೆಹಲಿ, ಆ.28: ಸದಾ ಹಗರಣಗಳ ಕೂಪದಲ್ಲಿ ಒದ್ದಾಡುವ ಕೆಲ ಬಿಜೆಪಿ ನಾಯಕರ ನಡುವೆ ಸಭ್ಯ ರಾಜಕಾರಣಿ, ಕ್ಲೀನ್ ಇಮೇಜ್ ಇರುವ ವ್ಯಕ್ತಿ ಎನಿಸಿಕೊಂಡಿರುವ ಕೇಂದ್ರ ರೈಲ್ವೆ ಸಚಿವ ಸದಾನಂದ ಗೌಡರಿಗೆ ಈಗ ಮುಜುಗರದ ಸಂದರ್ಭ ಒದಗಿದೆ. ಸದಾನಂದ ಗೌಡರ ಪುತ್ರನ ರೇಪ್ ಕೇಸ್ ಬಗ್ಗೆ ತಿಳಿದುಕೊಂಡಿರುವ ಬಿಜೆಪಿ ಬಾಸ್ ಅಮಿತ್ ಶಾ ಅವರು ಈ ಬಗ್ಗೆ ವಿವರಣೆ ಕೇಳಿದ್ದಾರೆ.
ಸದಾನಂದ ಗೌಡ ಅವರ ಪುತ್ರ ಕಾರ್ತಿಕ್ ಗೌಡ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿರುವುದು ಈಗ ರಾಷ್ಟ್ರಮಟ್ಟದ ಸುದ್ದಿಯಾಗಿದೆ. ಅತ್ಯಾಚಾರದ ಜೊತೆ ಯುವತಿಗೆ ವಂಚಿಸಿ ಮತ್ತೊಂದು ಮದುವೆ ನಿಶ್ಚಿತಾರ್ಥ ಮಾಡಿಕೊಂಡಿರುವುದು ಅದರಲ್ಲೂ ಅದಕ್ಕೆ ಖುದ್ದು ಸದಾನಂದ ಗೌಡರೇ ಸಾಕ್ಷಿಯಾಗಿರುವುದು ಬಿಜೆಪಿ ಹಿರಿಯ ನಾಯಕರಲ್ಲಿ ತಳಮಳ ಹುಟ್ಟಿಸಿದೆ.[ಸದಾನಂದ ಗೌಡರ ಪುತ್ರ ಕಾರ್ತಿಕ್ ಕೈ ಕೊಟ್ಟ]
ಕ್ಲೀನ್ ಇಮೇಜ್ ರಾಜಕಾರಣಿ ಸದಾನಂದ ಗೌಡರು ಇದೇನು ಬಂತು ಆಪತ್ತು ಎಂದು ಕೆಲವರು ಹಲುಬಿದರೆ, ಮತ್ತೆ ಕೆಲವರು ಮಗನ ಬದುಕಿನ ಚಕ್ರ ನಿಯಂತ್ರದಲ್ಲಿಲ್ಲ ಇನ್ನೂ ದೇಶದ ರೈಲಿನ ಗಾಲಿ ಹೇಗೆ ನಿಯಂತ್ರಿಸುತ್ತಾರೆ ಎಂದು ನಗೆ ಚೆಲ್ಲಿದ್ದಾರೆ.
2003ರಲ್ಲಿ ರಸ್ತೆ ಅಪಘಾತದಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ಹಿರಿಯ ಮಗ ಕೌಶಿಕ್ ಗೌಡನನ್ನು ಕಳೆದುಕೊಂಡ ದುಃಖ ಇನ್ನೂ ಸದಾನಂದ ಗೌಡರನ್ನು ಬಿಟ್ಟಿಲ್ಲ. ರಾಜಕೀಯ ಏಳಿಗೆ, ಕರ್ನಾಟಕದ ಸಿಎಂ, ಕೇಂದ್ರ ರೈಲ್ವೆ ಸಚಿವರಾಗಿ ಸಂತಸದ ದಿನಗಳನ್ನು ಕಾಣುವ ಹೊತ್ತಿಗೆ ಮತ್ತೊಮ್ಮೆ ಕಿರಿಯ ಪುತ್ರನ ಅವಾಂತರದಿಂದ ಡಿವಿಎಸ್ ಅವರಿಗೆ 'ಪುತ್ರ ಶೋಕಂ ನಿರಂತರಂ' ಎಂಬ ವಾಕ್ಯ ಕಾಡತೊಡಗಿದೆ. ಅಂದಹಾಗೆ, ಗುರುವಾರ ಮಧ್ನಾಹ್ನ 2 ಗಂಟೆ ವೇಳೆಗೆ ನಟಿ ಕಮ್ ರೂಪದರ್ಶಿ ಮೈತ್ರಿಯಾ ಗೌಡ ಸುದ್ದಿಗೋಷ್ಠಿ ನಡೆಸಲಿದ್ದಾರೆ.[ಡಿವಿಎಸ್ ಪುತ್ರನ ವಿರುದ್ಧ ದೂರು]

ಅಮಿತ್ ಶಾ ಭೇಟಿಗೆ ದೆಹಲಿಗೆ ಹೊರಟ ಡಿವಿಎಸ್
ಇನ್ನಷ್ಟು ಮುಜುಗರಕ್ಕೀಡಾಗುವ ಮೊದಲು ಈ ಬಗ್ಗೆ ಪಕ್ಷದ ವತಿಯಿಂದ ಒಂದು ಪ್ರಕಟಣೆ ಹೊರಡಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸದಾನಂದ ಗೌಡರಿಗೆ ಕರೆ ಮಾಡಿ ಇಡೀ ಪ್ರಕರಣದ ಮಾಹಿತಿ ಕೇಳಿದ್ದಾರೆ.
ಸದ್ಯ ಕೇರಳ ಪ್ರವಾಸದಲ್ಲಿರುವ ಸದಾನಂದ ಗೌಡ ಅಮಿತ್ ಶಾ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ನಾಳೆ ದೆಹಲಿಗೆ ತೆರಳಲಿರುವ ಸದಾನಂದ ಗೌಡ, ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ.
ಸದಾನಂದ ಗೌಡರ ಪ್ರತಿಕ್ರಿಯೆ
'ನನ್ನ ಮಗ ಅಂಥವನಲ್ಲ. ಎರಡು ತಿಂಗಳ ಹಿಂದೆ ಈ ಎಂಗೇಜ್ ಮೆಂಟ್ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಬಂದಿವೆ. ನನ್ನ ಜೀವನ ತೆರೆದಿಟ್ಟ ಜೀವನ. ಮಂಗಳೂರಿನ ಮನೆಗೆ ಹೋಗಿ ಮದುವೆಯಾಗಿದ್ದು, ಎಂದಿದ್ದು ಆತಂಕಕಾರಿ, ಮದುವೆ ಬಗ್ಗೆ ಮುಂದುವರೆಯುವುದು ತಪ್ಪು' ಎಂದಿದ್ದಾರೆ.
'ಅಪ್ಪನ ಮಾನ ಕಳೆಯುವಂಥ ಯಾವ ಕಾರ್ಯವನ್ನು ನಾನು ಮಾಡಿಲ್ಲ' ಎಂದು ವರ ಕಾರ್ತಿಕ್ ಕೂಡಾ ದನಿಗೂಡಿಸಿದ್ದಾರೆ. 'ನನಗೆ ಮೈತ್ರಿಯಾ ಗೋತ್ತೇ ಇಲ್ಲ' ಎಂದು ಕಾರ್ತಿಕ್ ಹೇಳುವ ಮೂಲಕ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.
ಮೈತ್ರಿಯಾಗೆ ವೈದ್ಯಕೀಯ ಪರೀಕ್ಷೆ
ಪ್ರಕರಣ ಎತ್ತ ಸಾಗಿದೆ?: ಬುಧವಾರ ಸಂಜೆ ತಂಗಿ ಸುಪ್ರಿಯಾ ಹಾಗೂ ವಕೀಲ ಅಶೋಕ್ ರೊಂದಿಗೆ ಆರ್ ಟಿ ನಗರ ಠಾಣೆಗೆ ಆಗಮಿಸಿದ ಮೈತ್ರಿಯಾ, ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪರಿಚಯವಿದ್ದ ಕಾರ್ತಿಕ್, ಮದುವೆಯಾಗುವುದಾಗಿ ನಂಬಿಸಿ ಅನೇಕ ಬಾರಿ ದೈಹಿಕ ಸಂಬಂಧ ಬೆಳೆಸಿದ್ದ ನಂತರ ಅವನ ಬಲವಂತಕ್ಕೆ ಮಣಿದು, ಮಂಗಳೂರಿನಲ್ಲಿರುವ ಸದಾನಂದಗೌಡರ ಮನೆಯಲ್ಲಿ ಜೂ.5 ಮದುವೆಯಾಗಿದ್ದೆ. ಅದರೆ, ಈಗ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅನ್ಯಾಯ ಮಾಡಿದ್ದಾನೆ ಎಂದು ದೂರಿನಲ್ಲಿ ಮೈತ್ರಿಯಾ ವಿವರಿಸಿದ್ದಾರೆ.

ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿಕೆ
ಬುಧವಾರ ಸಂಜೆ ಸಹೋದರಿ ಸುಪ್ರಿಯಾ ಹಾಗೂ ವಕೀಲರೊಂದಿಗೆ ರವೀಂದ್ರ ನಾಥ ಠಾಗೋರ್ ನಗರ ಠಾಣೆಗೆ ಆಗಮಿಸಿದ ಮೈತ್ರಿಯಾ, ಒಂದು ವರ್ಷಕ್ಕೂ ಹೆಚ್ಚು ದಿನಗಳಿಂದ ಪರಿಚಯವಿದ್ದ ಕಾರ್ತಿಕ್, ಮದುವೆಯಾಗುವುದಾಗಿ ದೈಹಿಕ ಸಂಬಂಧ ಬೆಳೆಸಿದ್ದ, ಮಂಗಳೂರಿನಲ್ಲಿರುವ ಸದಾನಂದಗೌಡರ ಮನೆಯಲ್ಲಿ ಜೂ.5 ಮದುವೆಯಾಗಿದ್ದ ಎಂದು ದೂರಿನಲ್ಲಿ ಮೈತ್ರಿಯಾ ವಿವರಿಸಿದ್ದಾರೆ.
ಐಪಿಸಿ ಸೆಕ್ಷನ್ 420 ಮತ್ತು 376ರ ಅಡಿಯಲ್ಲಿ ಕಾರ್ತಿಕ್ ವಿರುದ್ಧ ಕೇಸ್ ದಾಖಲಾಗಿದೆ. ತಡರಾತ್ರಿ ಮೈತ್ರಿಯಾಗೆ ವೈದ್ಯಕೀಯ ಪರೀಕ್ಷೆ ಕೂಡಾ ನಡೆಸಲಾಗಿದೆ. ಕಾರ್ತಿಕ್ ವಿರುದ್ಧ ಅತ್ಯಾಚಾರ, ವಂಚನೆ ಪ್ರಕರಣ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ವಿಚಾರಣೆಗಾಗಿ ಕಾರ್ತಿಕ್ ರನ್ನು ಬಂಧಿಸಬಹುದಾಗಿದೆ ಎಂದು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಹೇಳಿದ್ದಾರೆ.

ಆರ್ ಟಿ ನಗರ ಠಾಣಾಧಿಕಾರಿಗಳಿಂದ ವಿವರಣೆ
ಆರ್ ಟಿ ನಗರದ ಸಿಬಿಐ ರಸ್ತೆ ನಿವಾಸಿ ಮೈತ್ರಿಯಾ ಗೌಡ ಬಿನ್ ವೆಂಕಟೇಶ್ವರ ಗೌಡ ಅವರು ದಾಖಲಿಸಿರುವ ದೂರಿನ ಅನ್ವಯ ಆರೋಪಿ ಕಾರ್ತಿಕ್ ಗೌಡ ಬಿನ್ ಡಿವಿ ಸದಾನಂದಗೌಡ ವಯಸ್ಸು 28, ಇವರ ಮೇಲೆ ಭಾರತೀಯ ದಂಡ ಸಂಹಿತೆ ಅನ್ವಯ ಅತ್ಯಾಚಾರ(376) ಹಾಗೂ ವಂಚನೆ (420) ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಮನವಿ ಮಾಡಿದಂತೆ ಅಪಹರಣ, ಫೋಕ್ಸೋ, ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣದ ಎಫ್ ಐಆರ್ ದಾಖಲಿಸಲಾಗಿಲ್ಲ. ಪ್ರಕರಣ ತನಿಖೆ ಹಂತದಲ್ಲಿದ್ದು, ಆರೋಪಿ ವಿಚಾರಣೆ ನಂತರ ಹೆಚ್ಚುವರಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗುವುದು ಎಂದು ಠಾಣಾಧಿಕಾರಿ ಓಂಕಾರಯ್ಯ ಹೇಳಿದ್ದಾರೆ.ಚಿತ್ರಕೃಪೆ: SAM events, ಮೇ ತಿಂಗಳಿನಲ್ಲಿ ಕಾರ್ತಿಕ್ ಮೊದಮೊದಲು ಪರಿಚಯವಾದ ಕಾಲದಲ್ಲಿ ತೆಗೆದ ಚಿತ್ರ ಇದಾಗಿದೆ.












Click it and Unblock the Notifications