ಡಿವಿಎಸ್ ಪುತ್ರನ ವಿರುದ್ಧ ದೂರು ನೀಡಿದ ನಟಿ
ಬೆಂಗಳೂರು, ಆ.28 : ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ಅವರು ನನ್ನನ್ನು ವಿವಾಹವಾಗಿದ್ದರು ಎಂದು ಬುಧವಾರ ಹೇಳಿದ್ದ ನಟಿ ಮೈತ್ರಿಯಾ ಗೌಡ, ಕಾರ್ತಿಕ್ ವಿರುದ್ಧ ಬೆಂಗಳೂರಿನ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮೈತ್ರಿಯಾ ಗೌಡ ಅವರು, ಕಾರ್ತಿಕ್ ಗೌಡ ಜತೆ ಈಗಾಗಲೇ ನನ್ನ ವಿವಾಹವಾಗಿದೆ, ಆ ವಿಷಯ ಮುಚ್ಚಿಟ್ಟು ಆತ ಬೇರೆ ಯುವತಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಕಾರ್ತಿಕ್, ನನ್ನನ್ನು ಮದುವೆಯಾಗಿದ್ದ ಸಂಗತಿ ಅವರ ಕುಟುಂಬ ಸದಸ್ಯರಿಗೂ ಗೊತ್ತಿತ್ತು. ಲೈಂಗಿಕವಾಗಿ ನನ್ನನ್ನು ಬಳಸಿಕೊಂಡು ಮರುಮದುವೆಗೆ ಪ್ರಯತ್ನ ನಡೆಸಿರುವ ಅವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಿ ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

ಸ್ನೇಹಿತರ ಮೂಲಕ ನನಗೆ ಕಾರ್ತಿಕ್ ಪರಿಚಯವಾಗಿದ್ದರು. ಅವರು ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸಿದ್ದರು. ಅಲ್ಲದೇ, ಜೂನ್ 5ರಂದು ನನ್ನನ್ನು ಬಲವಂತದಿಂದ ಮಂಗಳೂರಿನ ಮನೆಗೆ ಕರೆದುಕೊಂಡು ಹೋಗಿ ಅರಿಶಿನದಾರ ಕಟ್ಟಿ ಮದುವೆಯಾಗಿ ಕೆಲ ದಿನಗಳವರೆಗೆ ಸಂಸಾರ ನಡೆಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. [ಸದಾನಂದ ಗೌಡರ ಪುತ್ರ ಕಾರ್ತಿಕ್ ಕೈ ಕೊಟ್ಟ : ನಟಿ]
ಕಾರ್ತಿಕ್ ಅವರು ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು, ಬೇರೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು ನನಗೆ ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕಾರ್ತಿಕ್ ವಿರುದ್ಧ ಅತ್ಯಾಚಾರ, ಅಪಹರಣ ಮತ್ತು ವಂಚನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬುಧವಾರ ನಿಶ್ಚಿತಾರ್ಥ : ಕೇಂದ್ರ ರೈಲ್ವೆ ಸಚಿವ ಡಿವಿ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡ ಅವರ ನಿಶ್ಚಿತಾರ್ಥ ಮಡಿಕೇರಿಯಲ್ಲಿ ಬುಧವಾರ ನಡೆದಿತ್ತು. ಈ ನಡುವೆ ಕಾರ್ತಿಕ್ ಜೊತೆ ನನ್ನ ಮದುವೆಯಾಗಿತ್ತು. ಟಿವಿ ಮಾಧ್ಯಮಗಳಿಂದ ನಿಶ್ಚಿತಾರ್ಥದ ಸುದ್ದಿ ತಿಳಿದು ಶಾಕ್ ಆಗಿದೆ ಎಂದು ನಟಿ ಮೈತ್ರಿಯಾ ಗೌಡ ಆರೋಪಿಸಿದ್ದರು. ಆದರೆ, ಡಿ.ವಿ ಸದಾನಂದಗೌಡ ಅವರ ಕುಟುಂಬ ಈ ಆರೋಪವನ್ನು ತಳ್ಳಿ ಹಾಕಿದೆ.












Click it and Unblock the Notifications